Top Newsಸುದ್ದಿ

ಫೈನಾನ್ಸ್ ಕಂಪನಿಯಿಂದ ಮನೆ ಸೀಜ್; ಬಾಣಂತಿ ಸಮೇತ ಕುಟುಂಬ ಬೀದಿಗೆ!

ಬೆಳಗಾವಿ: ರಾಯಬಾಗ ತಾಲೂಕಿನ ಅಲಖನೂರಿನಲ್ಲಿ ಖಾಸಗಿ ಫೈನಾನ್ಸ್ ಕಂಪನಿಯ ಅಮಾನವೀಯ ನಡೆಗೆ ಇಡೀ ಕುಟುಂಬವೊಂದು ಬೀದಿಗೆ ಬಿದ್ದಿರುವ ಘಟನೆ ವರದಿಯಾಗಿದೆ. ಹನುಮಂತ ಪಾಟೀಲ್ ಎಂಬುವವರು ತಮ್ಮ ತಂದೆಯ ಹೃದಯ ಶಸ್ತ್ರಚಿಕಿತ್ಸೆಗಾಗಿ ಮನೆ ಅಡವಿಟ್ಟು ಚಿಕ್ಕೋಡಿಯ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಕಂಪನಿಯಿಂದ ಸುಮಾರು 20 ಲಕ್ಷ ರೂ. ಸಾಲ ಪಡೆದಿದ್ದರು. ಕಳೆದ ವರ್ಷ ತಂದೆ ನಿಧನರಾದ ನಂತರ ಉಂಟಾದ ಆರ್ಥಿಕ ಮುಗ್ಗಟ್ಟು ಮತ್ತು ಆರೋಗ್ಯ ಸಮಸ್ಯೆಯಿಂದಾಗಿ ಕಳೆದ ಏಳು ತಿಂಗಳಿಂದ ಕಂತು ಪಾವತಿಸಲು ಸಾಧ್ಯವಾಗಿರಲಿಲ್ಲ. ಸುಮಾರು ಏಳು ಲಕ್ಷ ರೂಪಾಯಿ ಬಾಕಿ ಇದೆ ಎಂಬ ಕಾರಣಕ್ಕೆ ಫೈನಾನ್ಸ್ ಕಂಪನಿಯ ಸಿಬ್ಬಂದಿ ಏಕಾಏಕಿ ಆಗಮಿಸಿ ಮನೆಗೆ ಬೀಗ ಜಡಿದು ಸೀಜ್ ಮಾಡಿದ್ದಾರೆ.

ಈ ಕಾರ್ಯಾಚರಣೆಯ ಸಮಯದಲ್ಲಿ ಕನಿಷ್ಠ ಮಾನವೀಯತೆಯನ್ನೂ ತೋರದ ಸಿಬ್ಬಂದಿ, ಮನೆಯಲ್ಲಿದ್ದ ಬಟ್ಟೆ, ಹಾಸಿಗೆ ಹಾಗೂ ಪಾತ್ರೆಗಳಂತಹ ಅಗತ್ಯ ವಸ್ತುಗಳನ್ನು ಹೊರತೆಗೆಯಲು ಬಿಡದೆ ದರ್ಪ ತೋರಿದ್ದಾರೆ. ಇದರ ಪರಿಣಾಮವಾಗಿ ಮೂರು ತಿಂಗಳ ಹಸುಗೂಸು, ಬಾಣಂತಿ ಸೇರಿದಂತೆ ಐವರು ಕುಟುಂಬಸ್ಥರು ರಾತ್ರಿಯಿಡೀ ರಸ್ತೆಯಲ್ಲೇ ಕಾಲ ಕಳೆಯುವಂತಾಗಿದೆ. ಚಳಿಯಲ್ಲೇ ರಾತ್ರಿ ಕಳೆದಿದ್ದರಿಂದ ಐದು ತಿಂಗಳ ಮತ್ತೊಂದು ಹಸುಗೂಸಿನ ಆರೋಗ್ಯ ಕ್ಷೀಣಿಸಿದ್ದು, ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹನುಮಂತ ಪಾಟೀಲರ ಪತ್ನಿ ಶ್ರೀದೇವಿ ಅಳಲು ತೋಡಿಕೊಂಡಿದ್ದಾರೆ. ಕೋರ್ಟ್ ನೋಟಿಸ್ ಹೆಸರಿನಲ್ಲಿ ಮಹಿಳೆಯರು ಮತ್ತು ಮಕ್ಕಳು ಮಾತ್ರ ಇದ್ದ ಸಮಯದಲ್ಲಿ ನಡೆಸಿದ ಈ ದಿಢೀರ್ ಕ್ರಮ ಕುಟುಂಬಸ್ಥರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ನಾಲ್ಕು ವರ್ಷಗಳಿಂದ ಪ್ರಾಮಾಣಿಕವಾಗಿ ಕಂತು ಪಾವತಿಸಿಕೊಂಡು ಬಂದಿದ್ದರೂ, ಕೇವಲ ಏಳು ತಿಂಗಳ ಸಮಸ್ಯೆಗೆ ಈ ರೀತಿ ಬೀದಿಗೆ ದೂಡಿರುವುದು ಅಮಾನವೀಯ ಎಂದು ಹನುಮಂತ ಪಾಟೀಲ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಈ ಘಟನೆ ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸಂಕಷ್ಟದಲ್ಲಿರುವ ಕುಟುಂಬಕ್ಕೆ ಸಾಲ ಮರುಪಾವತಿಗೆ ಕಾಲಾವಕಾಶ ನೀಡಬೇಕೆಂದು ಸ್ಥಳೀಯರು ಮತ್ತು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಕಾನೂನು ಕ್ರಮದ ಹೆಸರಿನಲ್ಲಿ ಹಸುಗೂಸು ಮತ್ತು ಬಾಣಂತಿಯನ್ನು ಬೀದಿಗೆ ದೂಡಿದ ಕಂಪನಿಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದೆ.

Comments (0)

Your email address will not be published. Required fields are marked *

Back to top button