ಮಂಗಳೂರು: ಉಳ್ಳಾಲದ ಕೊಲ್ಯ ಗ್ರಾಮದಲ್ಲಿ ಲೂಡೋ ಆಟವಾಡುತ್ತಿದ್ದ ಎಂಟು ವರ್ಷದ ಬಾಲಕಿಯೊಬ್ಬಳು ಪ್ಲಾಸ್ಟಿಕ್ ಕಾಯಿನ್ ನುಂಗಿ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಕಾಸರಗೋಡು ಜಿಲ್ಲೆಯ ಮಧೂರಿನ ರಾಜೇಶ್ ಗಟ್ಟಿ ಹಾಗೂ ರಾಜೇಶ್ವರಿ ದಂಪತಿಯ ಪುತ್ರಿ ತನುಷ್ಕ (8) ಮೃತಪಟ್ಟ ದುರ್ದೈವಿ.
ಬಾಲಕಿ ತನ್ನ ಸಹೋದರ ಮತ್ತು ಸಹೋದರಿಯ ಜೊತೆ ಮನೆಯಲ್ಲಿ ಲೂಡೋ ಆಟವಾಡುತ್ತಿದ್ದಳು. ಈ ವೇಳೆ ಆಟದ ಶಂಕು ಆಕಾರದ ಪ್ಲಾಸ್ಟಿಕ್ ಕಾಯಿನ್ ಅನ್ನು ಆಕಸ್ಮಿಕವಾಗಿ ಬಾಯಿಗೆ ಹಾಕಿಕೊಂಡು ನುಂಗಿದ್ದಾಳೆ. ಕಾಯಿನ್ ಗಂಟಲಿನಲ್ಲಿ ಸಿಲುಕಿಕೊಂಡಿದ್ದರಿಂದ ಬಾಲಕಿಗೆ ಏಕಾಏಕಿ ಉಸಿರುಗಟ್ಟುವಿಕೆ ಉಂಟಾಗಿ, ಪರಿಸ್ಥಿತಿ ಗಂಭೀರ ಹಂತ ತಲುಪಿದೆ.
ತಕ್ಷಣವೇ ಪೋಷಕರು ಬಾಲಕಿಯನ್ನು ಚಿಕಿತ್ಸೆಗಾಗಿ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ದುರದೃಷ್ಟವಶಾತ್ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಬಾಲಕಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಕೇವಲ ಒಂದು ಸಣ್ಣ ಪ್ಲಾಸ್ಟಿಕ್ ಕಾಯಿನ್ ಮಗುವಿನ ಪ್ರಾಣವನ್ನೇ ಬಲಿಪಡೆದಿರುವುದು ಕುಟುಂಬಸ್ಥರಲ್ಲಿ ಹಾಗೂ ಸ್ಥಳೀಯರಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.


