ರಾಜಕೀಯಸುದ್ದಿ

ವಿಚಾರಣಾಧೀನ ಕೈದಿಗಳಿಗೂ ಬೇಕು ಮತದಾನದ ಹಕ್ಕು; ರಾಜ್ಯಸಭೆಯಲ್ಲಿ ಸಂಸದ ಈರಣ್ಣ ಕಡಾಡಿ ಆಗ್ರಹ

ಜೈಲಿನ ಒಳಗಿನಿಂದಲೇ ಚುನಾವಣೆಗೆ ಸ್ಪರ್ಧಿಸಲು ಕಾನೂನಿನಲ್ಲಿ ಅವಕಾಶವಿರುವಾಗ, ವಿಚಾರಣಾಧೀನ ಕೈದಿಗಳಿಗೆ ಮಾತ್ರ ಮತದಾನದ ಹಕ್ಕು ನಿರಾಕರಿಸುತ್ತಿರುವುದು ಸರಿಯಲ್ಲ ಎಂದು ಸಂಸದ ಈರಣ್ಣ ಕಡಾಡಿ ರಾಜ್ಯಸಭೆಯಲ್ಲಿ ಪ್ರತಿಪಾದಿಸಿದ್ದಾರೆ. 1951ರ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 62(5) ರ ಅಡಿಯಲ್ಲಿರುವ ಈ ತಾರತಮ್ಯವನ್ನು ಹೋಗಲಾಡಿಸಲು ಕಾಯ್ದೆಗೆ ತಿದ್ದುಪಡಿ ತರಬೇಕೆಂದು ಅವರು ಶೂನ್ಯ ಅವಧಿಯಲ್ಲಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪ್ರಸ್ತುತ ದೇಶದ ಜೈಲುಗಳಲ್ಲಿರುವ ಸುಮಾರು 4.9 ಲಕ್ಷ ಕೈದಿಗಳ ಪೈಕಿ ಶೇ. 77 ಕ್ಕೂ ಹೆಚ್ಚು ಮಂದಿ ವಿಚಾರಣಾಧೀನ ಕೈದಿಗಳಾಗಿದ್ದು, ಇವರಲ್ಲಿ ಬಹುತೇಕರು ಬಡತನದ ಕಾರಣಕ್ಕೆ ಜಾಮೀನು ಪಡೆಯಲಾಗದೆ ಜೈಲಿನಲ್ಲಿದ್ದಾರೆ ಎಂದು ಸದನದ ಗಮನ ಸೆಳೆದರು.ಒಬ್ಬ ವ್ಯಕ್ತಿ ಅಪರಾಧಿ ಎಂದು ಸಾಬೀತಾಗಿ ಶಿಕ್ಷೆ ಅನುಭವಿಸುತ್ತಿದ್ದರೂ, ಪೆರೋಲ್ ಅಥವಾ ಜಾಮೀನಿನ ಮೇಲೆ ಹೊರಬಂದಾಗ ಮತ ಚಲಾಯಿಸಲು ಅವಕಾಶವಿದೆ. ಆದರೆ, ಕಾನೂನಿನ ದೃಷ್ಟಿಯಲ್ಲಿ ಇನ್ನೂ ‘ನಿರ್ದೋಷಿ’ ಎಂದೇ ಪರಿಗಣಿಸಲ್ಪಡುವ ವಿಚಾರಣಾಧೀನ ಕೈದಿಗಳಿಗೆ ಮತದಾನದ ಹಕ್ಕಿಲ್ಲದಿರುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಕಡಾಡಿ ಅವರು ಅಭಿಪ್ರಾಯಪಟ್ಟರು.

ಅದರಲ್ಲೂ ವಿಶೇಷವಾಗಿ 7 ವರ್ಷಗಳಿಗಿಂತ ಕಡಿಮೆ ಅವಧಿಯ ಶಿಕ್ಷೆಯ ಆರೋಪ ಹೊತ್ತಿರುವವರಿಗೆ ಈ ಹಕ್ಕನ್ನು ನೀಡಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿದೆ. ಈ ಕಾನೂನು ಲೋಪವನ್ನು ಸರಿಪಡಿಸುವ ಮೂಲಕ ಪ್ರಜಾಪ್ರಭುತ್ವವನ್ನು ಮತ್ತಷ್ಟು ಗಟ್ಟಿಗೊಳಿಸಬೇಕು ಎಂದು ಆಗ್ರಹಿಸಿದರು.ಕೇಂದ್ರ ಸರ್ಕಾರವು ಈಗಾಗಲೇ ಹಲವು ಅಪ್ರಸ್ತುತ ಕಾನೂನುಗಳನ್ನು ರದ್ದುಗೊಳಿಸಿರುವ ಮಾದರಿಯಲ್ಲೇ, ವಿಚಾರಣಾಧೀನ ಕೈದಿಗಳ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು ಎಂದು ಅವರು ವಿನಂತಿಸಿದ್ದಾರೆ. ಸುಪ್ರೀಂ ಕೋರ್ಟ್ ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವುದನ್ನು ಅವರು ಸ್ವಾಗತಿಸಿದರು. ಲಕ್ಷಾಂತರ ಶೋಷಿತ ಮತ್ತು ಬಡ ವಿಚಾರಣಾಧೀನ ಕೈದಿಗಳಿಗೆ ಸಮಾನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ಕಾನೂನು ತಿದ್ದುಪಡಿ ಅತ್ಯಗತ್ಯವಾಗಿದೆ ಎಂದು ಸಂಸದ ಈರಣ್ಣ ಕಡಾಡಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.

Comments (0)

Your email address will not be published. Required fields are marked *

Back to top button