ದೇಶ/ವಿದೇಶರಾಜಕೀಯ

ರಾಹುಲ್ ಗಾಂಧಿಗೆ ‘ಹಕ್ಕುಚ್ಯುತಿ’ ಶಾಕ್..!ರಾಹುಲ್ ವರ್ಸಸ್ ಕಿರಣ್ ರಿಜಿಜು!

ಲೋಕಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ಮಾಡಿದ ಗಂಭೀರ ಆರೋಪಗಳು ಈಗ ಸಂಸದೀಯ ಸಂಘರ್ಷಕ್ಕೆ ಕಾರಣವಾಗಿವೆ. ಕೇಂದ್ರ ಸರ್ಕಾರವು ಭಾರತ ಮಾತೆಯನ್ನು ಮಾರಾಟ ಮಾಡಿದೆ ಹಾಗೂ ಭಾರತ-ಅಮೆರಿಕ ವಾಣಿಜ್ಯ ಒಪ್ಪಂದವು ಸಂಪೂರ್ಣ ಶರಣಾಗತಿಯಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಅಲ್ಲದೆ, ಭಾರತದ ಶಕ್ತಿ ಸುರಕ್ಷತೆಯನ್ನು ಅಮೆರಿಕಕ್ಕೆ ಒಪ್ಪಿಸಿ ರೈತರ ಹಿತಾಸಕ್ತಿಗಳನ್ನು ರಾಜಿ ಮಾಡಿಕೊಳ್ಳಲಾಗಿದೆ ಎಂಬ ಅವರ ಹೇಳಿಕೆಗಳು ಆಡಳಿತ ಪಕ್ಷದ ಕೆಂಗಣ್ಣಿಗೆ ಗುರಿಯಾಗಿವೆ.

ಸದನಕ್ಕೆ ತಪ್ಪು ಮಾಹಿತಿ ನೀಡಿದ ಮತ್ತು ಆಧಾರರಹಿತ ಆರೋಪಗಳನ್ನು ಮಾಡಿದ ಕಾರಣಕ್ಕಾಗಿ ರಾಹುಲ್ ಗಾಂಧಿ ವಿರುದ್ಧ ಹಕ್ಕುಚ್ಯುತಿ ಮಂಡಿಸಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಘೋಷಿಸಿದ್ದಾರೆ. ಭಾರತವನ್ನು ಯಾರೂ ಮಾರಲು ಅಥವಾ ಖರೀದಿಸಲು ಸಾಧ್ಯವಿಲ್ಲ, ಸಂಸತ್ತಿನ ನಿಯಮಗಳ ಪ್ರಕಾರ, ಯಾವುದೇ ಸದಸ್ಯರು ಗಂಭೀರ ಆರೋಪ ಮಾಡುವ ಮೊದಲು ಮುಂಚಿತವಾಗಿ ನೋಟಿಸ್ ನೀಡಬೇಕು ಮತ್ತು ಆ ಆರೋಪಗಳನ್ನು ಸಾಬೀತುಪಡಿಸಬೇಕು. ಆದರೆ ರಾಹುಲ್ ಗಾಂಧಿ ಅವರು ಯಾವುದೇ ಪುರಾವೆ ಅಥವಾ ನಿಯಮಾವಳಿ ಪಾಲಿಸದೆ ಪ್ರಧಾನಿ ಮತ್ತು ಸರ್ಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಈ ಸುಳ್ಳು ಹೇಳಿಕೆಗಳು ಮತ್ತು ಅಸಭ್ಯ ಪದಗಳನ್ನು ಸದನದ ದಾಖಲೆಗಳಿಂದ ತೆಗೆದುಹಾಕಬೇಕೆಂದು ಒತ್ತಾಯಿಸಿದ್ದಾರೆ.

ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ವಿರುದ್ಧವೂ ಯಾವುದೇ ಪೂರ್ವ ನೋಟಿಸ್ ಇಲ್ಲದೆ ಗಂಭೀರ ಆರೋಪಗಳನ್ನು ಮಾಡಲಾಗಿದೆ, ಸಂಸತ್ತಿನ ಘನತೆ ಮತ್ತು ನಿಯಮಗಳನ್ನು ಗಾಳಿಗೆ ತೂರಿ ರಾಹುಲ್ ಗಾಂಧಿ ವರ್ತಿಸಿದ್ದಾರೆ ಎಂಬುದು ಸರ್ಕಾರದ ವಾದವಾಗಿದೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕರ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ನಿರ್ಧರಿಸಲಾಗಿದ್ದು, ಇದು ಸದನದಲ್ಲಿ ಮತ್ತಷ್ಟು ವಾದ-ವಿವಾದಗಳಿಗೆ ಹಾದಿ ಮಾಡಿಕೊಟ್ಟಿದೆ.

Comments (0)

Your email address will not be published. Required fields are marked *

Back to top button