Top Newsದೇಶ/ವಿದೇಶರಾಜಕೀಯಸುದ್ದಿ

ಮುಂದಿನ ಚುನಾವಣೆಗೆ ನಾನೂ ರೆಡಿ; ಸಕ್ರಿಯ ರಾಜಕೀಯಕ್ಕೆ ರೋಷನ್ ಬೇಗ್ ರೀ-ಎಂಟ್ರಿ!

ಅನೇಕ ದಿನಗಳಿಂದ ರಾಜಕೀಯವಾಗಿ ತೆರೆಮರೆಗೆ ಸರಿದಿದ್ದ ಮಾಜಿ ಸಚಿವ ರೋಷನ್ ಬೇಗ್ ಈಗ ಮತ್ತೆ ಸಕ್ರಿಯ ರಾಜಕೀಯಕ್ಕೆ ಮರಳುವ ಮುನ್ಸೂಚನೆ ನೀಡಿದ್ದಾರೆ. ದೆಹಲಿಯಲ್ಲಿ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾದ ನಂತರ ಮಾತನಾಡಿ, ತಾವು ರಾಜಕೀಯದಿಂದ ನಾಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಾಜಕೀಯ ನನ್ನ ರಕ್ತದಲ್ಲಿದೆ, ನಾನು ವಿದ್ಯಾರ್ಥಿ ದೆಸೆಯಿಂದಲೇ ರಾಜಕೀಯ ಮಾಡುತ್ತಾ ಬಂದವನು. ನನ್ನನ್ನು ವ್ಯವಸ್ಥಿತವಾಗಿ ಕೋರ್ಟ್ ಕೇಸ್‌ಗಳಲ್ಲಿ ಸಿಲುಕಿಸಲಾಗಿತ್ತು, ಈಗ ನಿಧಾನವಾಗಿ ಅವುಗಳಿಂದ ಹೊರಬರುತ್ತಿದ್ದೇನೆ. ನಾನು ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳುವವನಲ್ಲ, ಮುಂದಿನ ಚುನಾವಣೆಯಲ್ಲಿ ಖಂಡಿತಾ ಸ್ಪರ್ಧಿಸುತ್ತೇನೆ” ಎಂದು ತಮ್ಮ ರಾಜಕೀಯ ಮರುಪ್ರವೇಶವನ್ನು ಘೋಷಿಸಿದ್ದಾರೆ.

ಯಾವ ಪಕ್ಷದಿಂದ ಸ್ಪರ್ಧೆ ಮಾಡಲಿದ್ದಾರೆ ಎಂಬ ಕುತೂಹಲಕ್ಕೆ ಉತ್ತರಿಸಿದ ಬೇಗ್, ಅದನ್ನು ಸದ್ಯದಲ್ಲೇ ಬಹಿರಂಗಪಡಿಸುವುದಾಗಿ ತಿಳಿಸಿದರು. ಇದೇ ವೇಳೆ ಅವರು ‘ಇಂಡಿಯನ್ ಮುಸ್ಲಿಂ ಫಾರ್ ಪ್ರೋಗ್ರೆಸ್ ಆ್ಯಂಡ್ ರಿಫಾರ್ಮ್ಸ್’ ಸಂಘಟನೆಯ ನಿಯೋಗದೊಂದಿಗೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮುಸ್ಲಿಂ ಸಮುದಾಯದ ಪ್ರಚಲಿತ ಸಮಸ್ಯೆಗಳ ಕುರಿತು ಚರ್ಚಿಸಿದರು. ವಿಶೇಷವಾಗಿ ಉತ್ತರಾಖಂಡ, ಅಸ್ಸಾಂ ಮತ್ತು ಉತ್ತರ ಪ್ರದೇಶದಲ್ಲಿ ಮುಸ್ಲಿಂ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಅಸ್ಸಾಂ ಮುಖ್ಯಮಂತ್ರಿಗಳ ನಡೆಗಳನ್ನು ಟೀಕಿಸಿದರು. ದೇಶದಲ್ಲಿ ಕೋಮು ಸೌಹಾರ್ದತೆ ಕಾಪಾಡುವಂತೆ ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲು ಮನವಿ ಮಾಡಿದರು.

ಈ ನಿಯೋಗವು ಶೀಘ್ರದಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಸಮಾಜದ ಹಿತದೃಷ್ಟಿಯಿಂದ ಮತ್ತಷ್ಟು ಮಾತುಕತೆ ನಡೆಸಲಿದೆ ಎಂದು ರೋಷನ್ ಬೇಗ್ ತಿಳಿಸಿದರು. ಹಿರಿಯ ನಾಯಕನ ಈ ದಿಢೀರ್ ದೆಹಲಿ ಭೇಟಿ ಮತ್ತು ರಾಜ್ಯ ರಾಜಕಾರಣಕ್ಕೆ ಮರಳುವ ಹೇಳಿಕೆಗಳು ಕರ್ನಾಟಕದ ರಾಜಕೀಯ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿವೆ.

Comments (0)

Your email address will not be published. Required fields are marked *

Back to top button