ಜಿಲ್ಲೆರಾಜಕೀಯಸುದ್ದಿ

ಬೆಂಗಳೂರಿನಲ್ಲಿ ಮಣಿಪುರ ಯುವತಿಯ ಬದುಕು ಬಲಿ ಪಡೆದ ಬಿಎಂಟಿಸಿ..!

ಬೆಂಗಳೂರು : ಟ್ರಾಫಿಕ್ ದಟ್ಟಣೆಯ ನಡುವೆ ಬಿಎಂಟಿಸಿ ಬಸ್‌ಗಳು ಸಾರ್ವಜನಿಕರ ಪಾಲಿಗೆ ಸಂಚಕಾರವಾಗಿ ಪರಿಣಮಿಸುತ್ತಿದ್ದು, ಮತ್ತೊಂದು ಭೀಕರ ಅಪಘಾತಕ್ಕೆ ಯುವತಿಯೊಬ್ಬರು ಬಲಿಯಾಗಿದ್ದಾರೆ. ಟಿನ್ ಫ್ಯಾಕ್ಟರಿ ಬಳಿ ನಡೆದ ಈ ದುರ್ಘಟನೆಯಲ್ಲಿ ಮಣಿಪುರ ಮೂಲದ ಹನ್ನಾ ಇನಕಾ ಎಂಬ ಯುವತಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಕೆಲಸದ ನಿಮಿತ್ತ ಬೆಂಗಳೂರಿನಲ್ಲಿ ವಾಸವಿದ್ದ ಹನ್ನಾ ಅವರು ನಿನ್ನೆ ಬೆಳಿಗ್ಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ, ವೇಗವಾಗಿ ಬಂದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಕೆ ಬ್ಯಾಲೆನ್ಸ್ ತಪ್ಪಿ ಕೆಳಗೆ ಬಿದ್ದಿದ್ದಾರೆ. ದುರಂತವೆಂದರೆ, ಬಸ್‌ನ ಚಕ್ರಗಳು ಆಕೆಯ ಮೇಲೆಯೇ ಹರಿದ ಪರಿಣಾಮ ಸ್ಥಳದಲ್ಲೇ ಪ್ರಾಣಪಕ್ಷಿ ಹಾರಿಹೋಗಿದೆ. ಈ ಅಪಘಾತವು ನಿನ್ನೆ ನಡೆದಿದ್ದರೂ, ಇಂದು ತಡವಾಗಿ ಬೆಳಕಿಗೆ ಬಂದಿದೆ.

ಮಹದೇವಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಬಸ್ ಚಾಲಕನನ್ನು ವಿಚಾರಣೆಗೊಳಪಡಿಸಿದ್ದಾರೆ. ನಗರದಲ್ಲಿ ಬಿಎಂಟಿಸಿ ಬಸ್‌ಗಳ ಅತಿವೇಗ ಮತ್ತು ಅಜಾಗರೂಕ ಚಾಲನೆಯಿಂದಾಗಿ ಸರಣಿ ಅಪಘಾತಗಳು ಸಂಭವಿಸುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ.

Comments (0)

Your email address will not be published. Required fields are marked *

Back to top button