
ಕೇರಳ: ವಲಯಾರ್-ವಡಕ್ಕಂಚೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಲ್ಲಂಗಡಿ ಹಣ್ಣುಗಳನ್ನು ಸಾಗಿಸುತ್ತಿದ್ದ ಲಾರಿಯೊಂದರಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿದ್ದು, ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.
ಪಾಲಕ್ಕಾಡ್ ಸರ್ಕಾರಿ ವೈದ್ಯಕೀಯ ಕಾಲೇಜು ಸಮೀಪದ ಸರ್ವೀಸ್ ರಸ್ತೆಯಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ, ಕಲ್ಲಂಗಡಿ ಹಣ್ಣುಗಳ ಅಡಿಯಲ್ಲಿ ಬಚ್ಚಿಡಲಾಗಿದ್ದ 100ಕ್ಕೂ ಹೆಚ್ಚು ಪೆಟ್ಟಿಗೆಗಳಷ್ಟು ಜಿಲೆಟಿನ್ ಕಡ್ಡಿಗಳು ಹಾಗೂ ಡಿಟೋನೇಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ತಮಿಳುನಾಡಿನ ಧರ್ಮಪುರಿ ಮೂಲದ ಲಾರಿ ಚಾಲಕ ಸೆಂಥಿಲ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲಿ ಈ ಸ್ಫೋಟಕಗಳನ್ನು ತ್ರಿಶೂರ್‌ಗೆ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಖಚಿತ ಸುಳಿವಿನ ಮೇರೆಗೆ ಇನ್ಸ್‌ಪೆಕ್ಟರ್ ವಿಪಿನ್ ಕುಮಾರ್ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಬಾಂಬ್ ನಿಷ್ಕ್ರಿಯ ದಳವೂ ಭಾಗವಹಿಸಿತ್ತು. ಇಷ್ಟು ದೊಡ್ಡ ಪ್ರಮಾಣದ ಸ್ಫೋಟಕಗಳನ್ನು ಯಾವ ಉದ್ದೇಶಕ್ಕಾಗಿ ಸಾಗಿಸಲಾಗುತ್ತಿತ್ತು ಎಂಬ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.




