65ರ ಹರೆಯದಲ್ಲಿ 6ನೇ ರ್ಯಾಂಕ್! ನಿವೃತ್ತಿಯ ನಂತರ ಸಂಸ್ಕೃತದಲ್ಲಿ ಎಂ.ಎ ಪದವಿ

ಒಂದು ಬಾರಿ ಪರೀಕ್ಷೆಯಲ್ಲಿ ಫೇಲಾದರೆ ಓದನ್ನೇ ಕೈಬಿಡುವ ಯುವಕರಿರುವ ಈ ಕಾಲದಲ್ಲಿ, ಬೆಂಗಳೂರಿನ 65 ವರ್ಷದ ವ್ಯಕ್ತಿಯೊಬ್ಬರು ಶಿಕ್ಷಣಕ್ಕೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ನಿವೃತ್ತಿಯ ನಂತರದ ವಿಶ್ರಾಂತ ಜೀವನವನ್ನು ಬದಿಗಿಟ್ಟು, ತಮ್ಮ ಇಳಿವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ಮೂಲಕ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ.
ಇವರ ಹೆಸರು ಲಕ್ಷ್ಮಿ ನಾರಾಯಣ್. ಬೆಂಗಳೂರಿನ ನಿವಾಸಿಯಾದ ಇವರು ಕೇಂದ್ರ ಸರ್ಕಾರದ ಜಿಎಸ್‌ಟಿ ವಿಭಾಗದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದವರು. ಮೂಲತಃ ಕಾಮರ್ಸ್ ವಿದ್ಯಾರ್ಥಿಯಾದ ಇವರು, ನಿವೃತ್ತಿಯ 5 ವರ್ಷಗಳ ನಂತರ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ವಿಷಯದಲ್ಲಿ ಎಂ.ಎ ಪದವಿ ಪಡೆದಿದ್ದಾರೆ.
ಕೇವಲ ಪದವಿ ಪಡೆಯುವುದು ಮಾತ್ರವಲ್ಲದೆ, ಲಕ್ಷ್ಮಿ ನಾರಾಯಣ್ ಅವರು ರಾಜ್ಯಕ್ಕೇ 6ನೇ ಸ್ಥಾನ ಪಡೆಯುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಕಾಮರ್ಸ್ ಹಿನ್ನೆಲೆಯವನಾದ ನಾನು ಸಂಸ್ಕೃತದಲ್ಲಿ ಫೇಲಾಗುತ್ತೇನೋ ಎಂಬ ಭಯವಿತ್ತು. ಆದರೆ ಸ್ನೇಹಿತರ ಪ್ರೋತ್ಸಾಹ ಮತ್ತು ಪ್ರಧಾನಿ ಮೋದಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಕಾರ್ಯತತ್ಪರತೆಯನ್ನು ಮಾದರಿಯಾಗಿಟ್ಟುಕೊಂಡು ಅಧ್ಯಯನ ಮಾಡಿದೆ ಎಂದು ಅವರು ಸಂತಸ ಹಂಚಿಕೊಂಡಿದ್ದಾರೆ.
1981ರಲ್ಲಿ ತಮ್ಮ ಮೊದಲ ಪದವಿ ಪಡೆದಿದ್ದ ಇವರು, ಈಗ 4 ದಶಕಗಳ ನಂತರ ಮಾಸ್ಟರ್ಸ್ ಪದವಿ ಮುಗಿಸಿದ್ದಾರೆ. ಅವರ ಸಾಧನೆ ಇಲ್ಲಿಗೆ ನಿಂತಿಲ್ಲ, ಮುಂದೆ ಸಂಸ್ಕೃತದಲ್ಲಿ ಹೆಚ್ಚಿನ ಸಂಶೋಧನೆ ನಡೆಸಿ ಪಿಎಚ್‌ಡಿ ಮಾಡುವ ಹಂಬಲ ವ್ಯಕ್ತಪಡಿಸಿದ್ದಾರೆ. ಓದಿಗೆ ವಯಸ್ಸು ಅಡ್ಡಿಯಲ್ಲ ಎಂದು ಸಾರಿದ ಈ ‘ಯುವ’ ಸಾಧಕನಿಗೆ ಈಗ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.




