ನಿಯಮಬಾಹಿರ ಪೋಸ್ಟಿಂಗ್ – BWSSBಯ PRO ವಿರುದ್ಧ ದೂರು

ಬೆಂಗಳೂರು: ನಿಯಮಬಾಹಿರ ಪೋಸ್ಟಿಂಗ್ ಹಿನ್ನೆಲೆಯಲ್ಲಿ BDAನ PRO ವಿಜಯಾನಂದ ರಿಲೀವ್ ಆದ ಬೆನ್ನಲ್ಲೇ BWSSBಯ PRO ವಿರುದ್ಧವೂ ದೂರು ದಾಖಲಾಗಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಹುದ್ದೆಯಲ್ಲಿ ರಾಮಲಿಂಗಪ್ಪ ಬಿ.ಕೆ ನಿಯಮಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ದೂರು ಹೋಗಿದೆ.
ಮೂಲತಃ ವಾರ್ತಾ ಇಲಾಖೆಯ ಉಪ ನಿರ್ದೇಶಕರಾದ ಬಿ.ಕೆ.ರಾಮಲಿಂಗಪ್ಪ, ಸರ್ಕಾರದ ಯಾವುದೇ ಅಧಿಕೃತ ಆದೇಶವಿಲ್ಲದೆ ನಿಯಮಬಾಹಿರವಾಗಿ, ಪಿಆರ್ ಹುದ್ದೆಯಲ್ಲಿ ಹೆಚ್ಚುವರಿಯಾಗಿ ಕೆಲಸ ಮಾಡುತ್ತಿದ್ದಾರೆ.
ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ವರ್ಗಾವಣೆ / ನಿಯೋಜನೆ / ಹೆಚ್ಚುವರಿ ಜವಾಬ್ದಾರಿ ನೀಡಬೇಕಾದರೆ, ಆಯಾ ಇಲಾಖಾ ಕಾರ್ಯದರ್ಶಿಗಳು ಅನುಮತಿ ನೀಡಿ, ಸರ್ಕಾರದ ಮಟ್ಟದಲ್ಲಿ ಆದೇಶವಾಗಬೇಕು. ಆದರೆ ಇಲಾಖೆಯ ಕಾರ್ಯದರ್ಶಿಗಳ ಗಮನಕ್ಕೆ ತರದೇ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರು ನಿಯಮಾವಳಿಗೆ ವಿರುದ್ಧವಾಗಿ ಹೊರಡಿಸಿರುವ ಆದೇಶದ ಅನ್ವಯ BWSSBಯಲ್ಲಿ ಬಿ.ಕೆ.ರಾಮಲಿಂಗಪ್ಪ ಅವರು ಪಿಆರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ದೂರಲಾಗಿದೆ.
ಜಲಮಂಡಳಿಯ ಸಾರ್ವಜನಿಕ ಸಂಪರ್ಕ ವಿಭಾಗದಲ್ಲಿ ಕೋಟ್ಯಾಂತರ ರೂಪಾಯಿಗಳ ವ್ಯವಹಾರ ನಡೆಯುತ್ತದೆ. ನಿಯಮಬಾಹಿರವಾಗಿ ಹೆಚ್ಚುವರಿ ಕೆಲಸ ನಿರ್ವಹಣೆ ಮಾಡುವ ಈ ಅಧಿಕಾರಿ ಒಂದೊಮ್ಮೆ ಭ್ರಷ್ಟಚಾರ ಎಸಗಿದರೆ, ಆಧಿಕಾರ ಲೋಪ ಎಸಗಿದರೆ ಕಾನೂನು ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ.
ಹೀಗಾಗಿ ತಕ್ಷಣವೇ ಎಚ್ಚೆತ್ತು ನಗರಾಭಿವೃದ್ಧಿ ಅಪರ ಮುಖ್ಯ ಕಾರ್ಯದರ್ಶಿಗಳು ಕ್ರಮ ತೆಗೆದುಕೊಳ್ಳಬೇಕು. ಬಿಕೆ ರಾಮಲಿಂಗಪ್ಪರನ್ನು BWSSBಯ ಪಿಆರ್ ಹುದ್ದೆಯಿಂದ ಬಿಡುಗಡೆಗೊಳಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
BDAನ ಸಾರ್ವಜನಿಕ ಸಂಪರ್ಕಾಧಿಕಾರಿ ಹುದ್ದೆಗೂ ಈ ಹಿಂದಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರು ಇದೇ ರೀತಿ ನಿಯಮಬಾಹಿರವಾಗಿ ಆದೇಶ ಹೊರಡಿಸಿದ್ದರು. ಈ ಬಗ್ಗೆ ಫ್ರೀಡಂಟಿವಿ ಮಾಡಿದ ವರದಿ BDA ಆಯುಕ್ತರ ಗಮನಕ್ಕೆ ಬಂದಿತ್ತು. ತಕ್ಷಣವೇ ಅಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಕೆ.ಎನ್.ವಿಜಯಾನಂದ ಎಂಬ ಅಧಿಕಾರಿಯನ್ನ ತಕ್ಷಣವೇ ಹುದ್ದೆಯಿಂದ ಬಿಡುಗಡೆಗೊಳಿಸಿದ್ದರು.




