ರಾಜಕೀಯ

‘ಮೆಟ್ಟಿಲು ಮುಖ್ಯಮಂತ್ರಿ’ ಸಿದ್ದರಾಮಯ್ಯ – ಕೇಂದ್ರ ಸಚಿವ ಹೆಚ್​​ಡಿಕೆ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಬಲಿಯಾಗಿದ್ದಾರೆ. ಇದೇ ವಿಚಾರವಾಗಿ ರಾಜಕೀಯ ಕೆಸರೆರಚಾಟಗಳು ನಡೆಯುತ್ತಲೇ ಇವೆ. ಬಿಜೆಪಿ-ಜೆಡಿಎಸ್​​ ಪಕ್ಷಗಳು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡುತ್ತಲೇ ಇವೆ.

ಇನ್ನು, ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ ಕೂಡ ಸಿಎಂ ವಿರುದ್ಧ ಟೀಕಾ ಪ್ರಹಾರ ಮುಂದುವರೆಸಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಖಾರವಾಗಿ ಪೋಸ್ಟ್ ಮಾಡಿರುವ ಹೆಚ್​​​ಡಿಕೆ, ವಿಧಾನಸೌಧದ ಮೆಟ್ಟಿಲು ಮೇಲೆ ಸರಕಾರ ವಿಜಯೋತ್ಸವ ಆಚರಿಸಿತು. ಅಲ್ಲಿ ಯಾರೂ ಸಾಯಲಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯಷ್ಟೇ ಕಾಲ್ತುಳಿತ ಸಂಭವಿಸಿ ಜನ ಸತ್ತಿದ್ದಾರೆ ಎಂದಿರುವ ಸಿಎಂ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಸಿದ್ದರಾಮಯ್ಯನವರೇ ನೀವು ರಾಜ್ಯಕ್ಕೆ ಮುಖ್ಯಮಂತ್ರಿಗಳೋ ಅಥವಾ ವಿಧಾನಸೌಧ ಮೆಟ್ಟಿಲುಗಳಿಗೆ ಮುಖ್ಯಮಂತ್ರಿಗಳೋ? ಕಾಲ್ತುಳಿತ ಆಗಿರುವುದು ವಿಧಾನಸೌಧದ ಮುಂದೆ ಅಲ್ಲ, ಅದಕ್ಕೂ ತಮಗೂ ಸಂಬಂಧವಿಲ್ಲ ಎನ್ನುವಂತೆ ಹೇಳಿಕೆ ನೀಡುತ್ತಿದ್ದಾರೆ. ಸನ್ಮಾನ್ಯ ಸಿದ್ದರಾಮಯ್ಯನವರೇ ನೀವು ಕರ್ನಾಟಕದ ಮುಖ್ಯಮಂತ್ರಿಯೋ ಅಥವಾ ವಿಧಾನಸೌಧ ಮೆಟ್ಟಿಲುಗಳಿಗಷ್ಟೇ ಮುಖ್ಯಮಂತ್ರಿಯೋ!? ದಯವಿಟ್ಟು ಹೇಳುವಿರಾ?

ದುರಂತದ ಹೊಣೆಯನ್ನು ಪೊಲೀಸರ ಮೇಲಷ್ಟೇ ಎತ್ತಿಹಾಕಿ ‘ಕೈ’ ತೊಳೆದುಕೊಳ್ಳುವುದು ಎಷ್ಟು ಸರಿ? ಪ್ರತಿಪಕ್ಷಗಳನ್ನು ದೂರಿ ಪಾರಾಗುವ ಹುನ್ನಾರವೇಕೆ? ಎಂದು ಸಿಎಂ ಸಿದ್ದರಾಮಯ್ಯಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಅವರನ್ನು ‘ಮೆಟ್ಟಿಲು ಮುಖ್ಯಮಂತ್ರಿ’ ಎಂದು ಕೇಂದ್ರ ಸಚಿವರು ಟೀಕಿಸಿದ್ದಾರೆ.

 

Comments (0)

Your email address will not be published. Required fields are marked *

Back to top button