
ಚೆನ್ನೈ: ಫೆಂಗಲ್ ಚಂಡಮಾರುತ ಕೊನೆಗೂ ನಿನ್ನೆ ರಾತ್ರಿ ತಮಿಳುನಾಡು ಕರಾವಳಿ ಜಿಲ್ಲೆಗಳಿಗೆ ಅಪ್ಪಳಿಸಿದ್ದು, ಭಾರಿ ಮಳೆ ಸುರಿಸುತ್ತಿದೆ. ತಮಿಳುನಾಡಿನ ಕರಾವಳಿಗೆ ಫೆಂಗಲ್ ಚಂಡಮಾರುತ ನಿನ್ನೆ ಅಪ್ಪಳಿಸಿದ್ದು, ರಾಜಧಾನಿ ಚೆನ್ನೈ ಸೇರಿದಂತೆ ಹಲವು ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ.ಶುಕ್ರವಾರ ಸಂಜೆಯಿಂದಲೇ ಭಾರಿ ಮಳೆ ಆರಂಭವಾಗಿದ್ದು, ಶನಿವಾರ ಚಂಡಮಾರುತ ಅಪ್ಪಳಿಸಿದ ನಂತರ ಬಿರುಸು ಪಡೆದಿದೆ. ಗಂಟೆಗೆ 70-100 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, ಹಲವಾರು ವಿಮಾನಗಳು ರದ್ದಾದ ಕಾರಣ ನೂರಾರು ಪ್ರಯಾಣಿಕರು ಪರದಾಡುವಂತಾಯಿತು.
ಇನ್ನು ಇದೇ ವೇಳೆ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಥಗಿತಗೊಳಿಸಲಾಗಿದೆ. ರೈಲು ಸೇವೆಗಳೂ ಕೂಡ ಬಹುತೇಕ ಅಸ್ತವ್ಯಸ್ಥಗೊಂಡಿದ್ದು, ದಕ್ಷಿಣ ರೈಲ್ವೆ ಸೇವೆಗಳಲ್ಲಿ ಬದಲಾವಣೆಗಳನ್ನು ಘೋಷಿಸಿದೆ.ಹಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದ್ದು, ರೈಲು ಸೇವೆ ಅಸ್ತವ್ಯಸ್ಥದಿಂದಾಗಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ತಮಿಳುನಾಡಿನ ಹಲವಾರು ಜಿಲ್ಲೆಗಳಲ್ಲಿ ಶಾಲೆಗಳು ಮತ್ತು ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಜನವಸತಿ ಅಧಿಕವಿರುವ ಪ್ರದೇಶಗಳಾದ ಮಾಂಬಳಮ್, ಕೋಡಂಬಾಕಂ, ಮಾದಿಪಕ್ಕಂ, ಕೀಳಕಟ್ಟಳೈ, ಅಶೋಕನಗರ, ನುಂಗಂಬಾಕಂ, ಆಳ್ವಾರ್‌ಪೇಟ್, ಪೆರಂಬೂರು ಹಾಗೂ ಪುರಸಾಯಿವಲ್ಕಮ್‌ಗಳಲ್ಲಿ ರಸ್ತೆ, ಮನೆಗಳಲ್ಲಿ ನೀರು ನಿಂತು ಹೆಚ್ಚು ತೊಂದರೆಯಾಗಿದೆ.
ಜನರು ಮನೆಯಿಂದ ಹೊರಬರಲಾರದೇ ಸಂಕಷ್ಟ ಅನುಭವಿಸಿದರು. ನೆರೆಯ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ, ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸಲಾಗಿದೆ..




