2400 ಕೆಎಸ್ಆರ್ಪಿ ಪೊಲೀಸರ ನೇಮಕಕ್ಕೆ ಆದೇಶ

ಕೆಎಸ್ಆರ್ಪಿನಲ್ಲಿ ಇಂಡಿಯನ್ ಬೆಟಾಲಿಯನ್ಗಳನ್ನು (ಐಆರ್ಬಿ) ಆರಂಭಿಸುವಂತೆ ರಾಜ್ಯ ಸರ್ಕಾರಕ್ಕೆ ಕೆಎಸ್ಆರ್ಪಿ ವಿಭಾಗದ ಎಡಿಜಿಪಿ ಉಮೇಶ್ ಕುಮಾರ್ ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆಗೆ ಸರ್ಕಾರವು ಹಸಿರು ನಿಶಾನೆ ತೋರಿದೆ.

ಬೆಂಗಳೂರು(ನ.30): ರಾಜ್ಯ ಪೊಲೀಸ್ ಇಲಾಖೆಗೆ ಸಿಹಿ ಸುದ್ದಿ ನೀಡಿರುವ ಸರ್ಕಾರವು, ಸಶಸ್ತ್ರ ಮೀಸಲು ಪಡೆ (ಕೆಎಸ್ಆರ್ಪಿ)ಯಲ್ಲಿ ಹೊಸದಾಗಿ 2400 ಪೊಲೀಸರ ಬಲವುಳ್ಳ ಎರಡು ಬೆಟಾಲಿಯನ್ಗಳ ಆರಂಭಕ್ಕೆ ಅಧಿಕೃತವಾಗಿ ಶುಕ್ರವಾರ ಆದೇಶಿಸಿದೆ.
ಕೆಎಸ್ಆರ್ಪಿನಲ್ಲಿ ಇಂಡಿಯನ್ ಬೆಟಾಲಿಯನ್ಗಳನ್ನು (ಐಆರ್ಬಿ) ಆರಂಭಿಸುವಂತೆ ರಾಜ್ಯ ಸರ್ಕಾರಕ್ಕೆ ಕೆಎಸ್ಆರ್ಪಿ ವಿಭಾಗದ ಎಡಿಜಿಪಿ ಉಮೇಶ್ ಕುಮಾರ್ ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆಗೆ ಸರ್ಕಾರವು ಹಸಿರು ನಿಶಾನೆ ತೋರಿದೆ.
ಪ್ರಸ್ತುತ 12 ಕೆಎಸ್ಆರ್ಪಿ ಹಾಗೂ 2 ಐಆರ್ಬಿ ಬೆಟಾಲಿಯನ್ಗಳಿವೆ. ಆದರೆ ರಾಜ್ಯದಲ್ಲಿ ಭದ್ರತೆ ಹಾಗೂ ಪ್ರಾಕೃತಿಕ ವಿಪತ್ತು ಸೇರಿದಂತೆ ತುರ್ತು ಸಂದರ್ಭಗಳನ್ನು ನಿಭಾಯಿಸಲು ಮತ್ತಷ್ಟು ಬೆಟಾಲಿಯನ್ ಗಳ ಅಗತ್ಯತೆ ಇತ್ತು. ಹೊಸ ಬೆಟಾಲಿಯನ್ಗಳ ಆರಂಭಿಸುವಂತೆ ಕೋರಿ ಸಲ್ಲಿಸಿದ್ದ ಪ್ರಸ್ತಾವನೆಗೆ ಸರ್ಕಾರ ಸಮ್ಮತಿಸಿ ರಾಜ್ಯ ಪತ್ರ ಬರೆದಿದೆ ಎಂದು ಎಡಿಜಿಪಿ ಉಮೇಶ್ ಕುಮಾರ್ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಆವತಿ ಸಮೀಪ 100 ಎಕರೆ ಹಾಗೂ ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನಲ್ಲಿ 50 ಎಕರೆ ಪ್ರದೇಶದಲ್ಲಿ ಹೊಸದಾಗಿ ರಚನೆಯಾಗಲಿರುವ ಐಆರ್ಬಿ ಬೆಟಾಲಿಯನ್ಗೆ ಮೀಸಲಿಡಲಾಗಿದೆ. ಇಲ್ಲಿ ಬೆಟಾಲಿಯನ್ಗಳ ತರಬೇತಿ ಹಾಗೂ ವಸತಿ ಸೇರಿದಂತೆ ಇತರೆ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ತಲಾ ಬೆಟಾಲಿಯನ್ನಲ್ಲಿ ಓರ್ವ ಕಮಾಂಡೆಂಟ್ ಸೇರಿ 1200 ಪೊಲೀಸರಂತೆ ಒಟ್ಟು 2400 ಪೊಲೀಸರ ನೇಮಕಾತಿಗೆ ಸಹ ಸರ್ಕಾರವು ಒಪ್ಪಿಗೆ ಸೂಚಿಸಿದೆ.
ಈ ಆದೇಶ ಹಿನ್ನೆಲೆಯಲ್ಲಿ ಹೊಸ ಬೆಟಾಲಿಯನ್ಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಇಲಾಖೆ ಶುರುಮಾಡಲಿದ್ದು, ಸರ್ಕಾರಿ ಸೇವೆ ಸೇರಲು ಕನಸು ಕಂಡಿರುವ ಉದ್ಯೋಗಾಕಾಂಕ್ಷಿಗಳಿಗೆ ಮತ್ತಷ್ಟು ಅವಕಾಶ ಸಿಗಲಿದೆ. ಚುನಾವಣೆಗಳು, ಬಂದ್ಗಳು, ಪ್ರತಿಭಟನೆಗಳು ಹಾಗೂ ಗಣ್ಯರ ಕಾರ್ಯಕ್ರಮಗಳು ಹೀಗೆ ಬಂದೋಬಸ್ತ್ ಕಾರ್ಯಗಳಲ್ಲಿ ಕೆಎಸ್ಆರ್ಪಿ ಹಾಗೂ ಐಆರ್ಬಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಪಡೆ ಬಲವರ್ಧನೆಗೆ ಪೊಲೀಸ್ ಇಲಾಖೆ ಮುಂದಾಗಿದೆ.




