ಮಂಗಳೂರು: ಕಮಿಷನರೇಟ್ ವ್ಯಾಪ್ತಿಯಲ್ಲಿ ಹೊಸ ವರ್ಷಾಚರಣೆ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಸುರಕ್ಷತೆ ಹಾಗೂ ಭದ್ರತೆಯ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಚರ್ಚ್, ಹೊಟೇಲ್, ರೆಸ್ಟೊರೆಂಟ್, ಖಾಸಗಿ ಸಭಾಂಗಣ ಹಾಗೂ ಒಳಾಂಗಣಗಳಲ್ಲಿ ಹೊಸ ವರ್ಷ ಆಚರಣೆಗೆ ಕೋರಿ 36 ಅರ್ಜಿಗಳು ಬಂದಿದ್ದು, ನಿಬಂಧನೆಗಳೊಂದಿಗೆ ಅನುಮತಿ ನೀಡಲಾಗಿದೆ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಒಳಾಂಗಣದಲ್ಲಿ ಕಾರ್ಯಕ್ರಮ ನಡೆಸುವವರು ಮಧ್ಯರಾತ್ರಿ 12.30 ರವರೆಗೆ ಅವಕಾಶ ನೀಡಲಾಗುತ್ತಿದೆ. ಬೀಚ್ ಅಥವಾ ಇತರೆಡೆ ಹೊರಾಂಗಣಗಳಲ್ಲಿ ಕಾರ್ಯಕ್ರಮ ನಡೆಸುವವರು ರಾತ್ರಿ 10 ಕ್ಕೆ ಮುಕ್ತಾಯಗೊಳಿಸಬೇಕು. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಂಪೂರ್ಣ ನಿಗಾ ವಹಿಸಲಿದ್ದು, 17 ಹೊಯ್ಸಳ ವಾಹನ ಸೇರಿದಂತೆ 66 ಸೆಕ್ಟರ್ ಮೊಬೈಲ್ ಘಟಕಗಳು ಕಾರ್ಯಾಚರಣೆಯಲ್ಲಿ ಇರಲಿವೆ. 106 ಕಡೆಗಳಲ್ಲಿ ಡಿವೈಎಸ್ಪಿ, ಎಸಿಪಿ, ಡಿಸಿಪಿ ಹಂತದ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿ ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿಸಿದರು.

ಚೆಕ್ಪೋಸ್ಟ್ನಲ್ಲಿ ಸಿವಿಲ್ ಹಾಗೂ ಸಂಚಾರ ವಿಭಾಗದ ಸಿಬ್ಬಂದಿ ಕಾರ್ಯಾಚರಣೆ ನಡೆಸಲಿದ್ದು, ಮದ್ಯಪಾನ ಮಾಡಿ ವಾಹನ ಚಲಾಯಿಸುವವರು ಸೇರಿದಂತೆ ಅಕ್ರಮ ಚಟುವಟಿಕೆಗಳ ವಿರುದ್ಧ ಕ್ರಮ ವಹಿಸಲಿದ್ದಾರೆ. ಡ್ರಗ್ಸ್ ವಿರುದ್ಧ ನಾಲ್ಕು ತಂಡಗಳು ಕಾರ್ಯಾಚರಣೆ ಮಾಡಲಿವೆ. ಸೇವನೆ ಮತ್ತು ಸಾಗಣೆ – ಮಾರಾಟದ ಮೇಲೆ ನಿಗಾ ವಹಿಸಲಿದ್ದಾರೆ. ಬೀಚ್ಗಳಲ್ಲಿ ಯಾವುದೇ ರೀತಿಯ ಅಹಿತಕರವಾದ ಘಟನೆಗಳಿಗೆ ಅವಕಾಶ ಇಲ್ಲ. ಮುಂಜಾಗೃತಾ ಕ್ರಮಗಳ ಜತೆಗೆ ಲೈಟಿಂಗ್ ವ್ಯವಸ್ಥೆಗೂ ಕ್ರಮ ವಹಿಸಲಾಗಿದೆ. 112 ಕಡೆಗೆ ಸ್ಥಳೀಯ ಅಧಿಕಾರಿಗಳು ನೇರವಾಗಿ ಸಂಪರ್ಕಕ್ಕೆ ಸಹಕಾರಿ ಆಗುವಂತೆ ಕ್ರಮ ವಹಿಸಲಾಗಿದೆ ಎಂದರು.