Top Newsಸುದ್ದಿ

ಇ.ಡಿ ಯಿಂದ ದಾಖಲೆಗಳ ಭೇಟೆ: ಕಾಂಗ್ರೆಸ್ ಸಂಸದಗೆ ಲೋಕಾ ಗ್ರಿಲ್

ಒಂದು ಕಡೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿನ ನಿವೇಶನ ಹಂಚಿಕೆ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ(ಇ.ಡಿ.) ಮುಡಾ ಕಚೇರಿಯಲ್ಲಿ ನಿರಂತರವಾಗಿ ದಾಖಲೆಗಳ ಸಂಗ್ರಹದಲ್ಲಿ ತೊಡಗಿದ್ದರೆ, ಇತ್ತ ಲೋಕಾಯುಕ್ತ ಪೊಲೀಸರು ಸಂಸದರೂ ಆಗಿರುವ ನಿವೃತ್ತ ಐಎಎಸ್ ಅಧಿಕಾರಿ ಜಿ. ಕುಮಾರ ನಾಯಕ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಶುಕ್ರವಾರ ಮುಡಾ ಮೇಲೆ ದಿಢೀರ್ ದಾಳಿ ನಡೆಸಿದ್ದ ಇ.ಡಿ. ತಂಡ ತಡ ರಾತ್ರಿವರೆಗೂ ಪ್ರಕರಣ ಸಂಬಂಧ ದಾಖಲೆಗಳ ಸಂಗ್ರಹ ಮಾಡಿದ್ದಲ್ಲದೇ ಶನಿವಾರವೂ ಬೆಳಗ್ಗೆಯಿಂದಲೇ ಕಾರ್ಯಾಚರಣೆ ಆರಂಭಿಸಿ ರಾತ್ರಿ ವರೆಗೂ ಮುಂದುವರಿಯಿತು. ಇತ್ತ ಲೋಕಾಯುಕ್ತ ಪೊಲೀಸರು ಕೆಸರೆಯ ಸರ್ವೇ ನಂಬರ್ 462 ಮತ್ತು 464ರ ವಿವಾದಿತ ಭೂ ಪರಿವರ್ತನೆ ಮಾಡಿದ್ದ ಆಗಿನ ಜಿಲ್ಲಾಧಿಕಾರಿಯಾಗಿದ್ದ ಹಾಗೂ ಇಂದಿನ ರಾಯಚೂರು ಕಾಂಗ್ರೆಸ್ ಸಂಸದ ಜಿ.ಕುಮಾರ ನಾಯಕ್ ಅವರನ್ನು ಶನಿವಾರ ವಿಚಾರಣೆಗೆ ಕರೆದು 4 ಗಂಟೆಗಳ ಕಾಲ ಪ್ರಕರಣ ಸಂಬಂಧ ವಿಚಾರಣೆಗೊಳಪಡಿಸಿ ಹಗರಣದ ಕುರಿತಂತೆ ಪ್ರಮುಖ ವಿಚಾರಗಳ ಮಾಹಿತಿ ಸಂಗ್ರಹಿಸಿದಾರೆ ಎನ್ನಲಾಗಿದೆ.

ಸಂಸದರ ವಿಚಾರಣೆ ಏಕೆ?

ಈ ವಿವಾದಿತ ಜಮೀನನ್ನು ಸಿಎಂ ಭಾಮೈದ ಮಲ್ಲಿಕಾರ್ಜುನಸ್ವಾಮಿ ಅವರಿಗೆ ಅನ್ಯಕ್ರಾಂತ ಮಾಡುವಾಗ ಜಿಲ್ಲಾಧಿಕಾರಿ ಸ್ಥಳ ಪರಿಶೀಲಿಸಿಲ್ಲ ಎನ್ನುವ ಆರೋಪ ಕೇಳಿ ಬಂದಿತ್ತು. ಏಕೆಂದರೆ ಮಲ್ಲಿಕಾರ್ಜುನ ಸ್ವಾಮಿ ಅವರು ದೇವರಾಜು ಅವರಿಂದ 3.16 ಎಕರೆ ಜಮೀನನ್ನು ಖರೀದಿ ಮಾಡುವ ಮೊದಲೇ ಮುಡಾ ಭೂ ಸ್ವಾಧೀನ ಮಾಡಿಕೊಂಡು ಬಡಾವಣೆಯನ್ನು ಅಭಿವೃದ್ಧಿಗೊಳಿಸುವ ಪ್ರಕ್ರಿಯೆ ನಡೆಸಿತ್ತು. ಈ ವಿಚಾರವನ್ನು ಮರೆ ಮಾಚಿ ಕೃಷಿ ಭೂಮಿಯಾಗಿ ಪರಿವರ್ತನೆ ಮಾಡಿಕೊಟ್ಟಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಜಿ. ಕುಮಾರ ನಾಯಕ್ ಅವರನ್ನು ಲೋಕಾಯುಕ್ತ ಎಸ್‌ಪಿ ಟಿ.ಜೆ. ಉದೇಶ್ ಕರೆದು ವಿಚಾರಣೆ ನಡೆಸಿದಾರೆ.

ತಡರಾತ್ರಿವರೆಗೂ ಇ.ಡಿ. ಗ್ರಿಲ್

ಸಿಆರ್‌ಪಿಎಫ್ ಯೋಧರ ಭದ್ರತೆಯೊಂದಿಗೆ ಶನಿವಾರ ಬೆಳಗ್ಗೆ 9.40ರ ಹೊತ್ತಿಗೆ ಮುಡಾ ಕಚೇರಿಗೆ ಆಗಮಿಸಿದ ಇ.ಡಿ. ಅಧಿಕಾರಿಗಳ ತಂಡ ಕೈಯಲ್ಲಿ ಎರಡು ಹೊಸ ಹಾರ್ಡ್ ಡಿಸ್ಕ್ಅ ನ್ನು ಮುಡಾ ಕಚೇರಿಯೊಳಗೆ ಕೊಂಡೊಯಿತು. ಸ್ವಲ್ಪ ಹೊತ್ತಿಗೆ ಮುಡಾ ಆಯುಕ್ತ ಟಿ. ರಘುನಂದನ್‌, ಕಾರ್ಯದರ್ಶಿ ಪ್ರಸನ್ನ ಕುಮಾರ್ ಸೇರಿ ಮುಡಾ ಅಧಿಕಾರಿಗಳು ಕಚೇರಿಗೆ ಆಗಮಿಸಿದರು. ಮುಡಾ ಅಧಿಕಾರಿಗಳು ಬಂದ ತಕ್ಷಣ ಮತ್ತೆ ದಾಖಲೆ ಪರಿಶೀಲನಾ ಕಾರ್ಯ ಮುಂದುವರಿಸಿದ ಇಡಿ ಅಧಿಕಾರಿಗಳು ಶನಿವಾರ ತಡರಾತ್ರಿವರೆಗೆ ಪರಿಶೀಲನೆ ನಡೆಸಿದ್ದು, ಈ ವೇಳೆ ಕಚೇರಿಯ ಕಂಪ್ಯೂಟರ್‌ಗಳಲ್ಲಿದ್ದ ಭೂ ದಾಖಲೆಗಳನ್ನು ಎರಡು ಹಾರ್ಡ್ ಡಿಸ್ಕ್‌ನಲ್ಲಿ ಅಧಿಕ ಸಂಗ್ರಹಿಸಿಕೊಂಡಿದ್ದಾರೆ.

ವೈಟ್ಲರ್ ಹಾಕಿದ್ದ ದಾಖಲೆಗೆ ಹುಡುಕಾಟ

ಸಿಎಂ ಸಿದ್ದ ರಾಮಯ್ಯ ಅವರ ಪತ್ನಿಗೆ ಮುಡಾದಿಂದ ನೀಡಲಾಗಿದ್ದ 14 ನಿವೇಶನಗಳ ಪತ್ರ ವ್ಯವಹಾರ ಸಂಬಂಧ ಕೆಲವೊಂದು ದಾಖಲೆಗೆ ವೈಟ್ನರ್ ಹಾಕಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಅದರ ಮೂಲ ದಾಖಲೆಯನ್ನು ನೀಡುವಂತೆ ಮುಡಾ ಆಯುಕ್ತರಿಗೆ ಕೇಳಿದ್ದಾರೆ ಎನ್ನಲಾ ಗಿದೆ.

100 ಪುಟಗಳ ದಾಖಲೆ ವಶಕ್ಕೆ

ಈ ಮಧ್ಯೆ ಇ.ಡಿ. ಅಧಿಕಾರಿಗಳು ಪ್ರಕರಣದ ಮೂಲ ಭೂ ಮಾಲೀಕತ್ವ ಮತ್ತು ನಂತರದ ಮಾಲೀಕತ್ವ ಸಂಬಂಧ ಮೈಸೂರು ತಾಲೂಕು ಕಚೇರಿಯಲ್ಲಿ 100 ಪುಟಗಳ ದಾಖಲೆಯನ್ನು ಸಂಗ್ರಹಿಸಿದ್ದು, ಇದರ ಜತೆಗೆ ಸರ್ವೇ ನಂಬರ್ 462 ಮತ್ತು 464ರ ಮೂಲ ನಕ್ಷೆಯನ್ನು ಅಧಿಕಾರಿಗಳಿಂದ ಪಡೆದಿದ್ದಾರೆ ಎನ್ನಲಾಗಿದೆ. ಶುಕ್ರವಾರ ಬೆಳಗ್ಗೆ ಮುಡಾ ಮತ್ತು ಮೈಸೂರು ತಾಲೂಕು ಕಚೇರಿ ಮೇಲೆ ಧಿಡೀರ್ ದಾಳಿ ನಡೆಸಿದ ಇಡಿ ಅಧಿಕಾರಿಗಳು ಎರಡನೇ ದಿನವಾದ ಶನಿವಾರವೂ ತನಿಖೆ ಮುಂದುವರಿಸಿದರು. ಈ ನಡುವೆ ಮುಡಾದಿಂದ ಯಾವುದೇ ದಾಖಲೆಗಳ ಕಳ್ಳತನ ಆಗದಂತೆ ಮುಡಾ ಕಚೇರಿಗೆ ಸಿಆರ್​ಪಿಎಫ್​ ಯೋಧರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ಹಿಂಬಾಗಿಲಿನಿಂದಲೂ ಪ್ರವೇಶ

ಮೊದಲ ದಿನವಾದ ಶುಕ್ರವಾರ ಮುಡಾ ಕಚೇರಿ ಮೇಲೆ ದಿಢೀರ್ ದಾಳಿ ನಡೆಸಿ, ಇಡೀ ಕಚೇರಿಯನ್ನು ತಮ್ಮ ಸುಪರ್ದಿಗೆ ಪಡೆದಿದ್ದ ಇ.ಡಿ ಅಧಿಕಾರಿಗಳು ಶನಿವಾರವೂ ಸಹ ಕಚೇರಿಯನ್ನು ತಮ್ಮ ಹಿಡಿತಕ್ಕೆ ಪಡೆದಿದ್ದರು. ಹಿಂಬಾಗಿಲ ಮೂಲಕವೂ ಮುಡಾ ಕಚೇರಿಗೆ ಲಗ್ಗೆಯಿಟ್ಟ ಇ.ಡಿ. ಅಧಿಕಾರಿಗಳು, ಒಂದಿಷ್ಟು ದಾಖಲೆಗಳನ್ನು ಹಿಡಿದು ಮುಡಾ ಕಚೇರಿಗೆ ತೆರಳಿದರು.

2ನೇ ದಿನವೂ ಕಚೇರಿ ಬಂದ್

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ದಾಖಲೆಗಳ ಪರಿಶೀಲನೆ ನಡೆಸುತ್ತಿರು ವ ಇ.ಡಿ. ಅಧಿಕಾರಿಗಳು ಸಂಪೂರ್ಣ ಕಚೇರಿಯನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಶನಿವಾರವೂ ಸಹ ಕಚೇರಿಯನ್ನು ಬಂದ್ ಮಾಡುವ ಮೂಲಕ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು.

ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಆಯುಕ್ತ

ಇ.ಡಿ. ಅಧಿಕಾರಿಗಳು ಎರಡನೇ ದಿನವೂ ಪ್ರಾಧಿಕಾರದ ಕಚೇರಿಯಲ್ಲಿ ತನಿಖೆ ಮುಂದುವರಿಸಿದ ಪರಿಣಾಮ ಮುಡಾ ಆಯುಕ್ತ ರಘುನಂದನ್, ಶನಿವಾರ ಬೆಳಗ್ಗೆ ಕಚೇರಿಗೆ ದೌಡಾಯಿಸಿದರು. ಈ ವೇಳೆ ಸ್ಥಳದಲ್ಲಿದ್ದ ಸುದ್ದಿಗಾರರಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿ, ಆತುರಾತುರವಾಗಿ ತಮ್ಮ ಕಚೇರಿಗೆ ತೆರಳಿದರು.

 

Comments (0)

Your email address will not be published. Required fields are marked *

Back to top button