Freedom TV

ಕ್ಲಬ್‌ಗಳು ಮಾರ್ಗದರ್ಶಿ ಸೂತ್ರ ಪಾಲಿಸಿ : ಹೈಕೋರ್ಟ್​

ಬೆಂಗಳೂರು: ‘ಬಸವೇಶ್ವರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಅಡಿಗ ರಿಕ್ರಿಯೇಶನ್ (ಮನರಂಜನಾ) ಕ್ಲಬ್ ಮಾಲೀಕರು ಮಾಹಿತಿ ಹಕ್ಕು ಕಾಯ್ದೆ ಕಾರ್ಯಕರ್ತನ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಕ್ಲಬ್‌ ನಡೆಸುತ್ತಿದ್ದಾರೆ. ಅಲ್ಲದೇ ಶಸ್ತ್ರಾಸ್ತ್ರ ಕಾಯ್ದೆಯನ್ನೂ ಉಲ್ಲಂಘಿಸಿದ್ದು ಕಳೆದ 10 ವರ್ಷಗಳಿಗೂ ಹೆಚ್ಚು ಕಾಲದಿಂದ ರೌಡಿ ಶೀಟರ್‌ನಲ್ಲಿದ್ದು ಅನೇಕ ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿದ್ದಾರೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಅರುಹಿದೆ.

‘ನನ್ನ ವಿರುದ್ಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ಕ್ಲಬ್ ಮಾಲೀಕ ಅಶೋಕ ಕುಮಾರ್ ಅಡಿಗ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ, ‘ಕ್ಲಬ್ ಮಾಲೀಕರು ಕಾರ್ಮಿಕ ಇಲಾಖೆಯ ಪರವಾನಗಿಯನ್ನು ಮಾತ್ರವೇ ಪಡೆದು ಕ್ಲಬ್ ನಡೆಸುತ್ತಿದ್ದಾರೆ. ಯಾವುದೇ ಶಾಸನಾತ್ಮಕ ಪರವಾನಗಿ ಪಡೆದಿಲ್ಲ. ಪೊಲೀಸರು ಸ್ಥಳಕ್ಕೆ ತೆರಳಿದಾಗ ಕ್ಲಬ್‌ನ ಎರಡು ಮತ್ತು ಮೂರನೇ ಅಂತಸ್ತಿನಲ್ಲಿ ಸುಮಾರು 300 ನೌಕರರು ಇರುವುದು ಕಂಡು ಬಂದಿದೆ. ಇಲ್ಲೆಲ್ಲಾ ಅನೇಕ ಕಾನೂನು ಬಾಹಿರವಾದ ಜೂಜಾಟಗಳನ್ನು ಆಡಲು ಅಸ್ಪದ ಕಲ್ಪಿಸಲಾಗಿದೆ’ ಎಂದು ಆರೋಪಿಸಿದರು.

ಇದನ್ನು ಅಲ್ಲಗಳೆದ ಅರ್ಜಿದಾರರ ಪರ ವಕೀಲ ಎಂ.ವಿನೋದ್ ಕುಮಾರ್, ‘ಅರ್ಜಿದಾರರ ವಿರುದ್ಧ ಇತ್ತೀಚೆಗೆ ರೌಡಿ ಶೀಟ್ ತೆರೆಯಲಾಗಿದೆ. ಪೊಲೀಸರು ಎರಡು ಮೂರು ದಿನಗಳಿಗೊಮ್ಮೆ ಮನೆಗೆ ತೆರಳಿ ಕಿರುಕುಳ ನೀಡುತ್ತಿದ್ದಾರೆ. ಅಷ್ಟಕ್ಕೂ ಪೊಲೀಸರು ಕೇಳುತ್ತಿರುವ ಪರವಾನಗಿಗೆ ಅರ್ಜಿ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಅರ್ಜಿದಾರರ ವಿರುದ್ದ ದಶಕದ ಹಿಂದಿನಿಂದಲೂ ರೌಡಿ ಶೀಟರ್ ತೆರೆಯಲಾಗಿದೆ ಎಂದು ಅಡ್ವೊಕೇಟ್ ಜನರಲ್ ಹೇಳುತ್ತಿದ್ದಾರೆ. ಕ್ಲಬ್ ನಡೆಸಲು ಈಗಾಗಲೇ ಇರುವ ಮಾರ್ಗಸೂಚಿ ಪಾಲಿಸುತ್ತಿಲ್ಲ. ಟ್ರಸ್ಟ್ ಕಾಯ್ದೆ ಅಡಿಯಲ್ಲಿ ಬ್ಯಾಂಕ್‌ನಿಂದ ಸಾಲ ಕೂಡಾ ಪಡೆಯಲಾಗಿದೆ ಎಂದೆಲ್ಲಾ ಆಕ್ಷೇಪಿಸಿದ್ದಾರೆ. ಹೀಗಿರುವಾಗ ಕ್ಲಬ್ ನಡೆಸಲು ಹೇಗೆ ಅವಕಾಶ ನೀಡಬೇಕು’ ಎಂದು ಪ್ರಶ್ನಿಸಿತು. ಅಂತೆಯೇ, ‘ಸೂಕ್ತ ಪರವಾನಗಿ ಪಡೆಯಲು ಸಕ್ಷಮ ಪ್ರಾಧಿಕಾರಗಳಲ್ಲಿ ಎರಡು ವಾರಗಳ ಒಳಗಾಗಿ ಅರ್ಜಿ ಸಲ್ಲಿಸಿ’ ಎಂದು ಅರ್ಜಿದಾರರಿಗೆ ಆದೇಶಿಸಿತು. ಅಂತೆಯೇ `ಕ್ಲಬ್‌ಗಳು ಮಾರ್ಗದರ್ಶಿ ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಹಾಗೂ ಈ ಪ್ರಕರಣದ ಅರ್ಜಿದಾರರಿಗೆ ಕಿರುಕುಳ ನೀಡಬಾರದು’ ಎಂದು ಅಡ್ವೊಕೇಟ್ ಜನರಲ್ ಅವರಿಗೆ ಸೂಚಿಸಿ ಅರ್ಜಿ ವಿಲೇವಾರಿ ಮಾಡಿತು.

Comments (0)

Your email address will not be published. Required fields are marked *

Back to top button