Tuesday, February 10, 2026
27.7 C
Bengaluru
Google search engine
LIVE
ಮನೆHealthವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಿಬ್ಬಂದಿಯಿಂದಲೇ 23 ಲಕ್ಷ ಯುಪಿಐ ಸ್ಕ್ಯಾಮ್

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಿಬ್ಬಂದಿಯಿಂದಲೇ 23 ಲಕ್ಷ ಯುಪಿಐ ಸ್ಕ್ಯಾಮ್

ಬೆಂಗಳೂರು: ಪ್ರತಿಷ್ಠಿತ ವಿಕ್ಟೋರಿಯಾ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಹಣಕ್ಕೆ ಕನ್ನ ಹಾಕಿರುವ ಬೃಹತ್ ಯುಪಿಐ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಆಸ್ಪತ್ರೆಯ ಕೆಲ ಭ್ರಷ್ಟ ಸಿಬ್ಬಂದಿಗಳು ಅಧಿಕೃತ ಕ್ಯೂಆರ್ ಕೋಡ್ ಬದಲು ತಮ್ಮ ವೈಯಕ್ತಿಕ ಕೋಡ್‌ಗಳನ್ನು ಬಳಸಿ ಸುಮಾರು 23 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಲೂಟಿ ಮಾಡಿದ್ದಾರೆ. ಇತ್ತೀಚೆಗಷ್ಟೇ ಬಿಎಂಟಿಸಿ ಬಸ್‌ಗಳಲ್ಲಿ ನಡೆದಿದ್ದ ಯುಪಿಐ ಸ್ಕ್ಯಾಮ್ ಮಾದರಿಯಲ್ಲೇ ಈ ಅಕ್ರಮ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಆಸ್ಪತ್ರೆಯ ಲ್ಯಾಬ್ ಪರೀಕ್ಷೆ, ಓಪಿಡಿ ಶುಲ್ಕ ಹಾಗೂ ಎಕ್ಸ್‌-ರೇ ವಿಭಾಗಗಳಲ್ಲಿ ರೋಗಿಗಳ ಅನುಕೂಲಕ್ಕಾಗಿ ಡಿಜಿಟಲ್ ಪಾವತಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಈ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗಳು ಆಸ್ಪತ್ರೆಯ ಅಧಿಕೃತ ಕ್ಯೂಆರ್ ಕೋಡ್ ಪಕ್ಕದಲ್ಲೇ ತಮ್ಮದೇ ಆದ ವೈಯಕ್ತಿಕ ಕ್ಯೂಆರ್ ಕೋಡ್‌ಗಳನ್ನು ಅಂಟಿಸಿದ್ದರು. ರೋಗಿಗಳು ಹಣ ಪಾವತಿಸಿದಾಗ ಅದು ನೇರವಾಗಿ ಈ ಸಿಬ್ಬಂದಿಗಳ ಖಾತೆಗೆ ವರ್ಗಾವಣೆಯಾಗುತ್ತಿತ್ತು. ಕಳೆದ ಕೆಲವು ತಿಂಗಳುಗಳಿಂದ ಹಣದ ಲೆಕ್ಕಾಚಾರದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ವೈದ್ಯಕೀಯ ಅಧೀಕ್ಷಕ ಡಾ. ದೀಪಕ್ ಅವರು ಆಂತರಿಕ ತನಿಖಾ ಸಮಿತಿ ರಚಿಸಿ ಪರಿಶೀಲನೆ ನಡೆಸಿದಾಗ ಈ ವಂಚನೆಯ ಜಾಲ ಬಯಲಾಗಿದೆ.

ಸದ್ಯ ಈ ಸಂಬಂಧ ವೈದ್ಯಕೀಯ ಅಧೀಕ್ಷಕರು ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ವಂಚನೆಯಲ್ಲಿ ಭಾಗಿಯಾಗಿರುವ ಸಿಬ್ಬಂದಿಗಳ ಪಟ್ಟಿ ಸಿದ್ಧಪಡಿಸುತ್ತಿರುವ ಪೊಲೀಸರು, ಅಕ್ರಮವಾಗಿ ಸಂಗ್ರಹಿಸಲಾದ ಹಣದ ಹರಿವಿನ ಬಗ್ಗೆ ತಾಂತ್ರಿಕ ಮಾಹಿತಿ ಕಲೆಹಾಕುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲೇ ಇಂತಹ ಹಗಲು ದರೋಡೆ ನಡೆದಿರುವುದು ಡಿಜಿಟಲ್ ಪಾವತಿ ವ್ಯವಸ್ಥೆಯ ಸುರಕ್ಷತೆಯ ಬಗ್ಗೆ ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments