ಸಿನಿಮಾ

ರಾಮಾಯಣ’ದ ಅಸಲಿ ಸೀಕ್ರೆಟ್ ಬಿಚ್ಚಿಟ್ಟ ಯಶ್ !

ಕೆಜಿಎಫ್ ಸರಣಿಯ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಟ ಯಶ್, ಇತ್ತೀಚೆಗೆ ಅಮೆರಿಕಾದಲ್ಲಿ ನಡೆದ ವಿಶೇಷ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ತಮ್ಮ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಬಗ್ಗೆ ಹಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ವಿಶೇಷವಾಗಿ ಸಿನಿಮಾದಲ್ಲಿ ರಾಮನ ಪಾತ್ರ ಮಾಡುತ್ತಿರುವ ರಣಬೀರ್ ಕಪೂರ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಯಶ್, ಇದೊಂದು ಕೇವಲ ಸಿನಿಮಾ ಮಾತ್ರವಲ್ಲದೆ ಜಗತ್ತಿಗೆ ನೀಡುತ್ತಿರುವ ಅತ್ಯಮೂಲ್ಯ ಕೊಡುಗೆ ಎಂದು ಬಣ್ಣಿಸಿದ್ದಾರೆ.

ರಾಮಾಯಣದ ಕಥೆಯ ಪ್ರಸ್ತುತತೆಯ ಬಗ್ಗೆ ಮಾತನಾಡಿದ ಯಶ್, ಈ ಮಹಾಕಾವ್ಯವು ಬಾಲ್ಯದಿಂದಲೇ ನಮ್ಮ ಜೀವನದ ಮೌಲ್ಯಗಳನ್ನು ರೂಪಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಎಷ್ಟೋ ಶತಮಾನಗಳ ಹಿಂದಿನ ಕಥೆಯಾದರೂ ಇಂದಿಗೂ ಅದು ಜನರ ಬದುಕನ್ನು ಶ್ರೀಮಂತವಾಗಿಸುತ್ತಿದೆ. ಇದೇ ಕಾರಣಕ್ಕೆ ಆಧುನಿಕ ತಂತ್ರಜ್ಞಾನ ಮತ್ತು ದೃಶ್ಯ ವೈಭವದ ಮೂಲಕ ರಾಮಾಯಣವನ್ನು ಜಾಗತಿಕ ಪ್ರೇಕ್ಷಕರಿಗೆ ಪರಿಚಯಿಸಲು ಚಿತ್ರತಂಡ ಸಜ್ಜಾಗುತ್ತಿದೆ ಎಂದು ಅವರು ಈ ಸಂದರ್ಭದಲ್ಲಿ ವಿವರಿಸಿದ್ದಾರೆ.

ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದ ರಾಮ ಮತ್ತು ರಾವಣನ ಮುಖಾಮುಖಿಯ ಬಗ್ಗೆ ಯಶ್ ಸ್ಪಷ್ಟನೆ ನೀಡಿದ್ದಾರೆ. ರಾಮಾಯಣ ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರುತ್ತಿದ್ದು, ಮೊದಲ ಭಾಗದಲ್ಲಿ ರಾಮ ಮತ್ತು ರಾವಣ ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳುವುದಿಲ್ಲ. ಪಾರ್ಟ್ 1 ರಲ್ಲಿ ರಾಮ ಮತ್ತು ರಾವಣ ಅವರವರ ರಾಜ್ಯಗಳಲ್ಲಿನ ಆಡಳಿತ ಮತ್ತು ಹಿನ್ನೆಲೆಯ ಮೇಲೆ ಕಥೆ ಸಾಗಲಿದ್ದು, ಇಬ್ಬರ ನಡುವಿನ ನೇರ ಸಂಘರ್ಷ ಮತ್ತು ಮುಖಾಮುಖಿ ದೃಶ್ಯಗಳು ಕೇವಲ ಎರಡನೇ ಭಾಗದಲ್ಲಿ ಮಾತ್ರ ಇರಲಿವೆ ಎಂದು ಅವರು ತಿಳಿಸಿದ್ದಾರೆ.

ಸಹನಟ ರಣಬೀರ್ ಕಪೂರ್ ಅವರ ಶ್ರಮವನ್ನು ಕೊಂಡಾಡಿರುವ ಯಶ್, ಅವರು ರಾಮನ ಪಾತ್ರಕ್ಕೆ ನ್ಯಾಯ ಒದಗಿಸಬಲ್ಲ ಅದ್ಭುತ ಕಲಾವಿದ ಎಂದು ಹೇಳಿದ್ದಾರೆ. ವೈಯಕ್ತಿಕ ಕೆಮೆಸ್ಟ್ರಿಗಿಂತ ಹೆಚ್ಚಾಗಿ ಇಡೀ ಚಿತ್ರತಂಡ ಒಂದು ಮಹತ್ತರ ಉದ್ದೇಶಕ್ಕಾಗಿ ಶ್ರಮಿಸುತ್ತಿದೆ. ಚಿತ್ರೀಕರಣದ ಸಮಯದಲ್ಲಿ ರಣಬೀರ್ ಅವರನ್ನು ಭೇಟಿಯಾದ ಕ್ಷಣಗಳನ್ನು ಸ್ಮರಿಸಿರುವ ಯಶ್, ಈ ಸಿನಿಮಾ ತೆರೆಯ ಮೇಲೆ ಮೂಡಿಬಂದಾಗ ಇಡೀ ಜಗತ್ತೇ ಬೆರಗಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

Comments (0)

Your email address will not be published. Required fields are marked *

Back to top button