uttara kannadaಸುದ್ದಿ

ಬರಿದಾದ ಕೃಷ್ಣೆ.. ಬೀದಿಗೆ ಬಂದ ರೈತ! ಜೀವನಾಡಿ ಬತ್ತಿದ್ರೂ ಜಪ್ಪಯ್ಯ ಅಂತ್ತಿಲ್ಲ ಸರ್ಕಾರ

ಉತ್ತರ ಕರ್ನಾಟಕದ ಜೀವನಾಡಿ ಕೃಷ್ಣೆ ಈಗ ಅಕ್ಷರಶಃ ಮರಳಿನ ಹಾಸಿಗೆಯಂತಾಗಿದ್ದು, ಬಾಗಲಕೋಟೆ ಜಿಲ್ಲೆಯ ಜಮಖಂಡಿ ಭಾಗದ ಜನರ ಬದುಕು ಕಂಗಾಲಾಗಿದೆ. ಅದರಲ್ಲೂ ಕಂಕಣವಾಡಿ ಬಳಿ ನದಿಯ ಒಡಲು ಬರಿದಾಗಿರುವುದು ನೋಡುಗರ ಕಣ್ಣಲ್ಲಿ ನೀರು ತರಿಸುವಂತಿದೆ. ಬೇಸಿಗೆಯ ಆರಂಭದಲ್ಲೇ ನದಿ ಬತ್ತಿ ಹೋಗಿರುವುದರಿಂದ ಕುಡಿಯುವ ನೀರಿಗಾಗಿ ಜನ ಅಲೆದಾಡುವಂತಾಗಿದ್ದು, ಜಾನುವಾರುಗಳ ಪರಿಸ್ಥಿತಿ ಹೇಳತೀರದಾಗಿದೆ. ಹಿಪ್ಪರಗಿ ಬ್ಯಾರೇಜ್‌ನ ಗೇಟ್‌ನಲ್ಲಿ ಉಂಟಾಗಿದ್ದ ತಾಂತ್ರಿಕ ದೋಷದಿಂದಾಗಿ ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹರಿದುಹೋಗಿದ್ದು ಈಗಿನ ಈ ಬರಗಾಲದ ಸ್ಥಿತಿಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಸರ್ಕಾರಗಳು ಬದಲಾದರೂ ನಮ್ಮ ಹಣೆಬರಹ ಮಾತ್ರ ಬದಲಾಗುತ್ತಿಲ್ಲ ಎಂದು ಇಲ್ಲಿನ ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ. ಬರದ ಬಿಸಿ ತಟ್ಟುತ್ತಿದ್ದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂಬ ಆಕ್ರೋಶ ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ. ಈಗಾಗಲೇ ಮಹಾರಾಷ್ಟ್ರ ಸರ್ಕಾರಕ್ಕೆ ನೀರಿಗಾಗಿ ಮನವಿ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಚಿವರು ಭರವಸೆ ನೀಡುತ್ತಿದ್ದರೂ, ನೆಲದ ವಾಸ್ತವ ಮಾತ್ರ ಬೇರೆಯೇ ಇದೆ. ನೀರಿನ ಕೊರತೆಯಿಂದಾಗಿ ಈ ಭಾಗದ ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ರೈತರು ಕೈಚೆಲ್ಲಿ ಕುಳಿತುಕೊಳ್ಳುವಂತಾಗಿದೆ.

ಜಿಲ್ಲಾಡಳಿತವು ಟ್ಯಾಂಕರ್ ಮೂಲಕ ನೀರು ಪೂರೈಸುವ ಭರವಸೆ ನೀಡಿದ್ದರೂ, ಅದು ಎಲ್ಲಾ ಹಳ್ಳಿಗಳಿಗೆ ತಲುಪುತ್ತಿಲ್ಲ ಎನ್ನುವ ದೂರುಗಳು ವ್ಯಾಪಕವಾಗಿವೆ. ಕೃಷ್ಣಾ ನದಿಯ ಮೇಲೆ ಅವಲಂಬಿತವಾಗಿರುವ ಸಾವಿರಾರು ಕುಟುಂಬಗಳು ಈಗ ಮುಂದಿನ ದಿನಗಳನ್ನು ಹೇಗೆ ಕಳೆಯಬೇಕು ಎಂಬ ಆತಂಕದಲ್ಲಿವೆ. ಸರ್ಕಾರ ಕೇವಲ ಬಜೆಟ್‌ನಲ್ಲಿ ಯೋಜನೆಗಳನ್ನು ಘೋಷಿಸುವುದಕ್ಕೆ ಸೀಮಿತವಾಗದೆ, ಕೂಡಲೇ ಮಹಾರಾಷ್ಟ್ರದ ಕೊಯ್ನಾ ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಬಾಗಲಕೋಟೆ ಜನರ ಏಕೈಕ ಒತ್ತಾಯವಾಗಿದೆ.

Comments (0)

Your email address will not be published. Required fields are marked *

Back to top button