ಸಿನಿಮಾಸುದ್ದಿ

39ನೇ ವಸಂತಕ್ಕೆ ಕಾಲಿಟ್ಟ ಸಮಂತಾ: ಸೌತ್ ಸುಂದರಿಗೆ ಅಭಿಮಾನಿಗಳ ಹಾರೈಕೆ!

ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು ಇಂದು ತಮ್ಮ 39ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಅದ್ಭುತ ಅಭಿನಯದ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿರುವ ಈ ಚೆಲುವೆ, ವೈಯಕ್ತಿಕ ಬದುಕಿನ ಏರಿಳಿತಗಳ ನಡುವೆಯೂ ಅಚಲವಾಗಿ ನಿಂತಿದ್ದಾರೆ. ನಾಗ ಚೈತನ್ಯ ಅವರೊಂದಿಗಿನ ವಿಚ್ಛೇದನ ಹಾಗೂ ಮೈಯೋಸಿಟಿಸ್ ಎಂಬ ಅಪರೂಪದ ಆರೋಗ್ಯ ಸಮಸ್ಯೆಯ ನರಕಯಾತನೆಯನ್ನು ಅನುಭವಿಸಿದರೂ ಸಮಂತಾ ಎದೆಗುಂದದೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಪ್ರಸ್ತುತ ಅವರು ಕನ್ನಡದ ದಿಗಂತ್ ಜೊತೆ ‘ಮಾ ಇಂತಿ ಬಂಗಾರಂ’ ಚಿತ್ರದಲ್ಲಿ ನಟಿಸಿದ್ದು, ಈ ಸಿನಿಮಾ ಮೇ 25 ರಂದು ತೆರೆಗೆ ಬರಲು ಸಿದ್ಧವಾಗಿದೆ.

ಸಮಂತಾ ಅವರ ಸಿನಿಮಾ ಪ್ರಯಾಣವನ್ನು ಗಮನಿಸಿದರೆ ಅವರು ನಟಿಸಿದ ಅನೇಕ ಚಿತ್ರಗಳು ಇಂದಿಗೂ ಪ್ರೇಕ್ಷಕರ ನೆನಪಿನಲ್ಲಿ ಹಚ್ಚಹಸಿರಾಗಿವೆ. ರಾಜಮೌಳಿ ನಿರ್ದೇಶನದ ‘ಈಗ’ ಚಿತ್ರದಲ್ಲಿ ನಾನಿ ಮತ್ತು ಕಿಚ್ಚ ಸುದೀಪ್ ಅವರೊಂದಿಗೆ ನಟಿಸಿದ್ದ ಸಮಂತಾ, ಆ ಚಿತ್ರದ ಮೂಲಕ ಭಾರಿ ಜನಪ್ರಿಯತೆ ಗಳಿಸಿದ್ದರು. ಅದೇ ರೀತಿ ರಾಮ್ ಚರಣ್ ಜೊತೆ ‘ರಂಗಸ್ಥಳಂ’ ಚಿತ್ರದಲ್ಲಿ ಹಳ್ಳಿ ಹುಡುಗಿ ರಮಾ ಲಕ್ಷ್ಮಿ ಪಾತ್ರದಲ್ಲಿ ಲಂಗಾ ದಾವಣಿ ತೊಟ್ಟು ನಟಿಸಿದ್ದ ಅವರ ಶೈಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಸುಕುಮಾರ್ ನಿರ್ದೇಶನದ ಈ ಸಿನಿಮಾ ಸಮಂತಾ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿತ್ತು.

ಪವನ್ ಕಲ್ಯಾಣ್ ಅಭಿನಯದ ಸೂಪರ್ ಹಿಟ್ ಚಿತ್ರ ‘ಅತ್ತಾರಿಂಟಿಕಿ ದಾರೇದಿ’ ಸಿನಿಮಾದಲ್ಲೂ ಸಮಂತಾ ಅಮೋಘ ನಟನೆ ತೋರಿದ್ದಾರೆ. ವಿಶೇಷವೆಂದರೆ ಇದೇ ಚಿತ್ರ ಕನ್ನಡದಲ್ಲಿ ಕಿಚ್ಚ ಸುದೀಪ್ ಮತ್ತು ರಚಿತಾ ರಾಮ್ ನಟನೆಯಲ್ಲಿ ‘ರನ್ನ’ ಹೆಸರಿನಲ್ಲಿ ರೀಮೇಕ್ ಆಗಿ ಯಶಸ್ಸು ಕಂಡಿತ್ತು. ಸಮಂತಾ ಅವರ ಅಭಿನಯದ ತಾಕತ್ತು ಎಷ್ಟಿದೆ ಎಂದರೆ ಅವರು ಸೌಮ್ಯ ಪಾತ್ರಗಳಿಗೂ ಮತ್ತು ಪ್ರೌಢಿಮೆಯುಳ್ಳ ಪಾತ್ರಗಳಿಗೂ ಸಮಾನವಾಗಿ ನ್ಯಾಯ ಒದಗಿಸುತ್ತಾರೆ.

ಇನ್ನು ಮಾಜಿ ಪತಿ ನಾಗ ಚೈತನ್ಯ ಅವರೊಂದಿಗೆ ಸಮಂತಾ ನಟಿಸಿದ ಸಿನಿಮಾಗಳು ಇಂದಿಗೂ ವಿಶೇಷವಾಗಿವೆ. ‘ಏ ಮಾಯೆ ಚೆಸೇವ’, ‘ಮನಂ’ ಹಾಗೂ ‘ಮಜಿಲಿ’ ಚಿತ್ರಗಳಲ್ಲಿ ಈ ಜೋಡಿಯ ಕೆಮಿಸ್ಟ್ರಿ ಅದ್ಭುತವಾಗಿ ಮೂಡಿಬಂದಿತ್ತು. ‘ಮನಂ’ ಚಿತ್ರದಲ್ಲಿ ಅಕ್ಕಿನೇನಿ ಕುಟುಂಬದ ಮೂರು ತಲೆಮಾರಿನ ನಟರೊಂದಿಗೆ ತೆರೆ ಹಂಚಿಕೊಂಡಿದ್ದ ಸಮಂತಾ, ನಾಗ ಚೈತನ್ಯ ಅವರೊಂದಿಗೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು. ಅವರ ಕೊನೆಯ ಚಿತ್ರವಾದ ‘ಮಜಿಲಿ’ಯಲ್ಲೂ ಸಮಂತಾ ಅವರ ನಟನೆಗೆ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಈ ನಟಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

Comments (0)

Your email address will not be published. Required fields are marked *

Back to top button