
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಕಾಂಬಿನೇಷನ್ನ ಸೂಪರ್ ಹಿಟ್ ಸಿನಿಮಾ ‘ಚಕ್ರವ್ಯೂಹ’ ತೆರೆಕಂಡು ಇಂದಿಗೆ ಬರೋಬ್ಬರಿ ಹತ್ತು ವರ್ಷಗಳು ಪೂರೈಸಿವೆ. ಏಪ್ರಿಲ್ 29, 2016ರಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ, ಸಮಾಜದಲ್ಲಿ ಯುವಜನತೆಯ ಜವಾಬ್ದಾರಿಯ ಬಗ್ಗೆ ಅದ್ಭುತ ಸಂದೇಶ ನೀಡುವ ಮೂಲಕ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು. ಅಪ್ಪು ಅವರ ಆ ಮಾಸ್ ಲುಕ್, ಪವರ್ಫುಲ್ ಎನರ್ಜಿ ಮತ್ತು ನಟನೆ ಇಂದಿಗೂ ಅಭಿಮಾನಿಗಳ ಮನದಲ್ಲಿ ಹಚ್ಚಹಸಿರಾಗಿದೆ.

‘ಚಕ್ರವ್ಯೂಹ’ ಸಿನಿಮಾ ಕೇವಲ ಕರ್ನಾಟಕಕ್ಕೆ ಸೀಮಿತವಾಗದೆ ಜಾಗತಿಕ ಮಟ್ಟದಲ್ಲೂ ಕನ್ನಡದ ಬಾವುಟ ಹಾರಿಸಿತ್ತು. ಆಸ್ಟ್ರೇಲಿಯಾದಲ್ಲಿ ಪ್ರೀಮಿಯರ್ ಆದ ಮೊದಲ ಕನ್ನಡ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದೆ. ನಿರ್ದೇಶಕ ಎಂ. ಶರವಣನ್ ಅವರ ಆಕ್ಷನ್ ಥ್ರಿಲ್ಲರ್ ಶೈಲಿ ಹಾಗೂ ಪುನೀತ್ ರಾಜ್ಕುಮಾರ್ ಮತ್ತು ಅರುಣ್ ವಿಜಯ್ ನಡುವಿನ ಜಿದ್ದಾಜಿದ್ದಿನ ಫೈಟ್ ಪ್ರೇಕ್ಷಕರಿಗೆ ರಸದೌತಣ ಬಡಿಸಿತ್ತು. ಇನ್ನು ಸಂಗೀತ ನಿರ್ದೇಶಕ ಎಸ್. ಥಮನ್ ಅವರ ಸಂಗೀತದ ಮೋಡಿ ಇಂದಿಗೂ ಮಾಸಿಲ್ಲ, ಚಿತ್ರದ ಹಾಡುಗಳು ಇಂದಿಗೂ ಪ್ರತಿಯೊಂದು ಸಮಾರಂಭಗಳಲ್ಲಿ ಸಖತ್ ಸೌಂಡ್ ಮಾಡುತ್ತಿವೆ.
ಸಾಮಾಜಿಕ ಕಳಕಳಿಯ ಜೊತೆಗೆ ಪಕ್ಕಾ ಕಮರ್ಷಿಯಲ್ ಅಂಶಗಳನ್ನು ಒಳಗೊಂಡಿದ್ದ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ದಾಖಲೆ ಬರೆದಿತ್ತು. ಹತ್ತು ವರ್ಷ ಕಳೆದರೂ ಅಪ್ಪು ಬಾಸ್ ಅವರ ಕ್ರೇಜ್ ಮತ್ತು ಈ ಸಿನಿಮಾದ ಮೇಲಿರುವ ಅಭಿಮಾನ ಕಿಂಚಿತ್ತೂ ಕಡಿಮೆಯಾಗಿಲ್ಲ. ಇಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಈ ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದು, ಈ ವಿಶೇಷ ದಿನದ ನೆನಪಿಗಾಗಿ ಹ್ಯಾಶ್ಟ್ಯಾಗ್ಗಳು ಸಖತ್ ಟ್ರೆಂಡ್ ಆಗುತ್ತಿವೆ.




