Tuesday, February 10, 2026
24.4 C
Bengaluru
Google search engine
LIVE
ಮನೆಜಿಲ್ಲೆಚುನಾವಣೆಗಾಗಿ ಗೋವಾದಿಂದ ಮದ್ಯ ಸಾಗಾಟ; ಬೆಳಗಾವಿಯಲ್ಲಿ ಕಿರಾತಕ ಸಿಕ್ಕಿಬಿದ್ದಿದ್ದು ಹೀಗೆ…

ಚುನಾವಣೆಗಾಗಿ ಗೋವಾದಿಂದ ಮದ್ಯ ಸಾಗಾಟ; ಬೆಳಗಾವಿಯಲ್ಲಿ ಕಿರಾತಕ ಸಿಕ್ಕಿಬಿದ್ದಿದ್ದು ಹೀಗೆ…

ಗೋವಾದಿಂದ ಮಹಾರಾಷ್ಟ್ರಕ್ಕೆ ಕ್ಯಾಂಟರ್ ವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಪ್ರಕರಣವನ್ನು ಬೆಳಗಾವಿಯ ಮಾಳಮಾರುತಿ ಠಾಣೆಯ ಪೊಲೀಸರು ಭೇದಿಸಿದ್ದಾರೆ. ಸಿಪಿಐ ಬಿ.ಆರ್. ಗಡ್ಡೇಕರ್ ನೇತೃತ್ವದ ತಂಡವು ಬೆಳಗಾವಿಯ ಶ್ರೀನಗರದ ಬಳಿ ಈ ದಾಳಿ ನಡೆಸಿದೆ. ಈ ಕಾರ್ಯಾಚರಣೆಯಲ್ಲಿ ಪೊಲೀಸರು ಸುಮಾರು 25 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ 900 ಮದ್ಯದ ಬಾಕ್ಸ್‌ಗಳನ್ನು ಜಪ್ತಿ ಮಾಡಿದ್ದು, ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

ಪೊಲೀಸರ ಕಣ್ಣಿಗೆ ಮಣ್ಣೆರಚಲು ಆರೋಪಿಯು ಕ್ಯಾಂಟರ್ ವಾಹನದಲ್ಲಿ ಮೇಲ್ನೋಟಕ್ಕೆ ಕಸ ತುಂಬಿರುವಂತೆ ತೋರಿಸಿ, ಅದರ ಒಳಭಾಗದಲ್ಲಿ ಮದ್ಯದ ಬಾಕ್ಸ್‌ಗಳನ್ನು ಅಡಗಿಸಿಟ್ಟಿದ್ದ. ಕಸದ ವಾಹನವನ್ನು ಪೊಲೀಸರು ತಪಾಸಣೆ ಮಾಡುವುದಿಲ್ಲ ಎಂಬ ನಂಬಿಕೆಯಿಂದ ಬೆಳಗಾವಿ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದಾಗ, ಖಚಿತ ಮಾಹಿತಿ ಆಧರಿಸಿ ಪೊಲೀಸರು ಈ ಹೈಟೆಕ್ ದರೋಡೆಯನ್ನು ಪತ್ತೆಹಚ್ಚಿದ್ದಾರೆ.

ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಸಂಸ್ಥೆಗಳ ಚುನಾವಣೆಗಾಗಿ ಈ ಮದ್ಯವನ್ನು ಗೋವಾದಿಂದ ಸಾಗಿಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಈ ಅಕ್ರಮ ಸಾಗಾಟದ ಹಿಂದೆ ಬೆಳಗಾವಿಯ ಅಬಕಾರಿ ಇಲಾಖೆ ಅಥವಾ ಸ್ಥಳೀಯ ಪೊಲೀಸರ ಸಹಕಾರವೇನಾದರೂ ಇದೆಯೇ ಎಂಬ ಸಂಶಯಗಳು ವ್ಯಕ್ತವಾಗಿವೆ. ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದು, ಜಾಲದ ಹಿಂದಿರುವ ಪ್ರಮುಖ ವ್ಯಕ್ತಿಗಳ ಪತ್ತೆಗೆ ಮುಂದಾಗಿದ್ದಾರೆ.

ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿ ಭಾರಿ ಪ್ರಮಾಣದ ಮದ್ಯವನ್ನು ಜಪ್ತಿ ಮಾಡಿದ ಇನ್ಸ್‌ಪೆಕ್ಟರ್‌ ಬಿ.ಆರ್. ಗಡ್ಡೇಕರ್ ಮತ್ತು ಮಾಳಮಾರುತಿ ಠಾಣೆಯ ತಂಡಕ್ಕೆ ನಗರ ಪೊಲೀಸ್ ಆಯುಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ತಂಡದ ಶ್ರಮವನ್ನು ಗುರುತಿಸಿ ನಗದು ಬಹುಮಾನವನ್ನು ಸಹ ಘೋಷಣೆ ಮಾಡಲಾಗಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments