Tuesday, February 10, 2026
24.4 C
Bengaluru
Google search engine
LIVE
ಮನೆಕ್ರೈಂ ಸ್ಟೋರಿಚುನಾವಣಾ ಆಕಾಂಕ್ಷೆಯಿಂದ ಮಗಳನ್ನೇ ಕೊಂದ ತಂದೆ; ಮಹಾರಾಷ್ಟ್ರದಲ್ಲಿ ಘಟನೆ

ಚುನಾವಣಾ ಆಕಾಂಕ್ಷೆಯಿಂದ ಮಗಳನ್ನೇ ಕೊಂದ ತಂದೆ; ಮಹಾರಾಷ್ಟ್ರದಲ್ಲಿ ಘಟನೆ

ಮಹಾರಾಷ್ಟ್ರ:ಅಧಿಕಾರ ಮತ್ತು ಚುನಾವಣಾ ಆಕಾಂಕ್ಷೆ ಮನುಷ್ಯನನ್ನು ಎಷ್ಟು ಕ್ರೂರಿಯನ್ನಾಗಿಸಬಹುದು ಎಂಬುದಕ್ಕೆ ಮಹಾರಾಷ್ಟ್ರದ ಈ ಘಟನೆ ಉದಾಹರಣೆಯಾಗಿದೆ. ಕೇವಲ ಚುನಾವಣೆಗೆ ಸ್ಪರ್ಧಿಸುವ ದುರಾಸೆಯಿಂದ ಹೆತ್ತ ತಂದೆಯೇ ತನ್ನ ಮಗಳನ್ನು ಕಾಲುವೆಗೆ ತಳ್ಳಿ ಹತ್ಯೆ ಮಾಡಿರುವ ಘೋರ ಘಟನೆ ನಡೆದಿದೆ.

ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಮುಖೇಡ್ ತಾಲೂಕಿನ ಕೆರೂರ್ ಗ್ರಾಮದ ನಿವಾಸಿ ಪಾಂಡುರಂಗ ಕೊಂಡ್ಮಂಗಳೆ (28) ಎಂಬಾತ ತನ್ನ 6 ವರ್ಷದ ಮಗಳು ಪ್ರಾಚಿಯನ್ನು ಹತ್ಯೆ ಮಾಡಿದ್ದಾನೆ. ಈತ ವೃತ್ತಿಯಲ್ಲಿ ಸೆಲೂನ್ ನಡೆಸುತ್ತಿದ್ದು, ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದ. ಈ ಘೋರ ಕೃತ್ಯಕ್ಕೆ ಪ್ರಚೋದನೆ ನೀಡಿದ ಮತ್ತು ಸಹಕರಿಸಿದ ಗ್ರಾಮದ ಹಾಲಿ ಸರಪಂಚ್ ಗಣೇಶ್ ರಾಮಚಂದ್ರ ಶಿಂಧೆ ಎಂಬಾತನನ್ನು ಕೂಡ ನಿಜಾಮಾಬಾದ್ ಪೊಲೀಸರು ಬಂಧಿಸಿದ್ದಾರೆ.

ಈ ಅಮಾನುಷ ಕೊಲೆಗೆ ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣಾ ನಿಯಮವೇ ಪ್ರಮುಖ ಕಾರಣವಾಗಿದೆ. ನಿಯಮದ ಪ್ರಕಾರ ಎರಡಕ್ಕಿಂತ ಹೆಚ್ಚು ಮಕ್ಕಳಿದ್ದಲ್ಲಿ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಲು ಅನರ್ಹರಾಗಿರುತ್ತಾರೆ. ಪಾಂಡುರಂಗನಿಗೆ ಮೂರು ವರ್ಷದ ಗಂಡು ಮಗು ಮತ್ತು ಆರು ವರ್ಷದ ಅವಳಿ ಹೆಣ್ಣು ಮಕ್ಕಳಿದ್ದರು. ಮೂವರು ಮಕ್ಕಳಿದ್ದ ಕಾರಣ ತಾನು ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಮನಗಂಡ ಈತ, ತನ್ನ ಹಿರಿಯ ಮಗಳನ್ನು ಕಳೆದುಕೊಂಡರೆ ಸ್ಪರ್ಧೆಗೆ ದಾರಿ ಸುಗಮವಾಗುತ್ತದೆ ಎಂಬ ಕ್ರೂರ ಆಲೋಚನೆ ಮಾಡಿದ್ದನು.

ಆರೋಪಿ ಪಾಂಡುರಂಗ ಮೊದಲು ಮಗಳನ್ನು ಎಲ್ಲಾದರೂ ಬಿಟ್ಟು ಬರಲು ಸಂಚು ರೂಪಿಸಿದ್ದನು. ಆದರೆ ಅವಳು ಮರಳಿ ಮನೆಗೆ ಬಂದರೆ ತನ್ನ ಅಕ್ರಮ ಬಯಲಾಗುತ್ತದೆ ಎಂಬ ಭೀತಿಯಿಂದ, ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಬೋಧನ್ ಕಾಲುವೆಗೆ ತಳ್ಳಿ ಆಕಸ್ಮಿಕ ಸಾವು ಎಂದು ಬಿಂಬಿಸಲು ಯತ್ನಿಸಿದ್ದನು. ಕೆಲವು ದಿನಗಳ ಹಿಂದೆ ಯೆಡಪಲ್ಲಿಯ ನಿಜಾಮ ಸಾಗರ್ ಕಾಲುವೆಯಲ್ಲಿ ಬಾಲಕಿಯ ಶವ ಪತ್ತೆಯಾದಾಗ, ಪೊಲೀಸರು ಆಕೆಯ ತಂದೆಯನ್ನು ವಿಚಾರಣೆ ನಡೆಸಿದ್ದರು. ಈ ವೇಳೆ ಮಗಳು ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಸುಳ್ಳು ಹೇಳಿ ದಾರಿ ತಪ್ಪಿಸಲು ಯತ್ನಿಸಿದರೂ, ಸತತ ತನಿಖೆಯ ನಂತರ ಆತ ಸತ್ಯ ಒಪ್ಪಿಕೊಂಡಿದ್ದಾನೆ.

ನಿಜಾಮಾಬಾದ್ ಪೊಲೀಸ್ ಆಯುಕ್ತ ಪಿ. ಸಾಯಿ ಚೈತನ್ಯ ಅವರ ನೇತೃತ್ವದಲ್ಲಿ ನಡೆದ ಈ ತನಿಖೆಯಲ್ಲಿ ಸತ್ಯ ಬಯಲಿಗೆ ಬಂದಿದೆ. ಕಾಲುವೆ ಬಳಿ ಕೆಲಸ ಮಾಡುತ್ತಿದ್ದ ರೈತರು ನೀಡಿದ ಮಾಹಿತಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಬಾಲಕಿಯ ಫೋಟೋ ತನಿಖೆಗೆ ಪ್ರಮುಖ ಸುಳಿವು ನೀಡಿದ್ದವು. ಸದ್ಯ ಪೊಲೀಸರು ಪಾಂಡುರಂಗ ಮತ್ತು ಸರಪಂಚ್ ಗಣೇಶ್ ಶಿಂಧೆಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments