Top Newsದೇಶ/ವಿದೇಶಸುದ್ದಿ

ರಾಜ್ಯಗಳಿಗೆ ಕೇಂದ್ರ ಗೃಹ ಇಲಾಖೆ ಹೈ ಅಲರ್ಟ್ ವಾರ್ನಿಂಗ್..!

ಮಧ್ಯಪ್ರಾಚ್ಯದಲ್ಲಿ ತೀವ್ರಗೊಂಡಿರುವ ಹಿಂಸಾಚಾರ ಹಾಗೂ ಇರಾನ್‌ನ ಪರಮೋಚ್ಚ ನಾಯಕ ಅಲಿ ಖಮೇನಿ ಅವರ ಹತ್ಯೆಯ ಬೆನ್ನಲ್ಲೇ ಭಾರತದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಈ ಘಟನೆಯು ದೇಶದ ಆಂತರಿಕ ಭದ್ರತೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ, ಕೇಂದ್ರ ಗೃಹ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಗರಿಷ್ಠ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕೃತವಾಗಿ ಸೂಚಿಸಿದೆ. ಯಾವುದೇ ಕಾರಣಕ್ಕೂ ದೇಶದೊಳಗೆ ಹಿಂಸಾಚಾರಕ್ಕೆ ಅವಕಾಶ ನೀಡಬಾರದು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿರುವ ಕೇಂದ್ರ ಸರ್ಕಾರ, ಭದ್ರತಾ ಪರಿಸ್ಥಿತಿಯನ್ನು ನಿರಂತರವಾಗಿ ಪರಾಮರ್ಶಿಸುತ್ತಿದೆ.

ರಾಜ್ಯ ಸರ್ಕಾರಗಳು ಮತ್ತು ಭದ್ರತಾ ಸಂಸ್ಥೆಗಳು ಈ ಸಂದರ್ಭದಲ್ಲಿ ಅತ್ಯಂತ ಎಚ್ಚರಿಕೆಯಿಂದ ಇರಬೇಕೆಂದು ಕೇಂದ್ರವು ಸ್ಪಷ್ಟಪಡಿಸಿದೆ. ಸಮಾಜದಲ್ಲಿ ಅಶಾಂತಿ ಮತ್ತು ಉದ್ವಿಗ್ನತೆ ಉಂಟುಮಾಡುವ ಶಕ್ತಿಗಳನ್ನು ತಕ್ಷಣವೇ ಗುರುತಿಸಿ ಅವರ ಮೇಲೆ ಕಣ್ಗಾವಲು ಇಡಲು ಸೂಚಿಸಲಾಗಿದೆ. ವಿಶೇಷವಾಗಿ ಇರಾನ್ ಪರವಾಗಿ ಮೂಲಭೂತವಾದಿ ಪ್ರಚಾರ ಕೈಗೊಳ್ಳುವವರ ಬಗ್ಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಹರಡುವವರ ಬಗ್ಗೆ ತೀವ್ರ ನಿಗಾ ವಹಿಸುವಂತೆ ರಾಜ್ಯಗಳಿಗೆ ನಿರ್ದೇಶನ ನೀಡಲಾಗಿದೆ.

ಗಲಭೆಗಳು ಸಂಭವಿಸುವ ಸಾಧ್ಯತೆಯಿರುವ ಅತಿಸೂಕ್ಷ್ಮ ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಲು ಗೃಹ ಸಚಿವಾಲಯ ತಿಳಿಸಿದೆ. ಸಾರ್ವಜನಿಕ ಧಾರ್ಮಿಕ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡುವಂತೆ ಮತ್ತು ಪ್ರಚೋದನಕಾರಿ ಭಾಷಣ ಮಾಡುವವರನ್ನು ಪತ್ತೆಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಯಂತ್ರಿಸಲು ಅಗತ್ಯಬಿದ್ದರೆ ಮುನ್ನೆಚ್ಚರಿಕಾ ಕ್ರಮವಾಗಿ ಬಂಧನಗಳನ್ನು ಮಾಡುವ ಅಧಿಕಾರವನ್ನೂ ಸ್ಥಳೀಯ ಪೊಲೀಸರಿಗೆ ನೀಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವುದು ಈಗಿನ ಪ್ರಮುಖ ಆದ್ಯತೆಯಾಗಿದೆ.

Comments (0)

Your email address will not be published. Required fields are marked *

Back to top button