ದೊಡ್ಡಬಳ್ಳಾಪುರ ಮಾಜಿ ಎಸಿ ದುರ್ಗಾಶ್ರೀ ವಿರುದ್ಧ FIR

68 ಎಕರೆ ಜಮೀನು ಅಕ್ರಮ ಖಾತೆ ಬದಲಾವಣೆ ಆರೋಪ
ಬೆಂಗಳೂರು: ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ಭೂ ಅಕ್ರಮದ ಬಾಂಬ್ ಸಿಡಿದಿದೆ. 68 ಎಕರೆ ಜಮೀನು ಅಕ್ರಮ ಖಾತೆ ಬದಲಾವಣೆ ಆರೋಪದಲ್ಲಿ ದೊಡ್ಡಬಳ್ಳಾಪುರ ಮಾಜಿ ಎಸಿ ದುರ್ಗಾಶ್ರೀ ವಿರುದ್ಧ ಟೌನ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ದೇವನಹಳ್ಳಿ ತಾಲ್ಲೂಕು ಕಸಬಾ ಹೋಬಳಿಯ ಮೂರು ಗ್ರಾಮಗಳ 87 ಸರ್ವೆ ನಂಬರ್ಗಳಲ್ಲಿ 68 ಎಕರೆ 35 ಗುಂಟೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಭೂ ಸುರಕ್ಷಾ RTC ಸಾಫ್ಟ್ವೇರ್ನಲ್ಲಿ ಅಕ್ರಮವಾಗಿ ಅಳವಡಿಸಿ, ಖಾತೆ ಬದಲಾವಣೆ ಮಾಡಿದ ಗಂಭೀರ ಆರೋಪ ಕೇಳಿ ಬಂದಿದೆ.
ಕಂದಾಯ ಆಯುಕ್ತಾಲಯ ಮತ್ತು ಜಿಲ್ಲಾಧಿಕಾರಿ ವರದಿ ಆಧರಿಸಿ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಆದೇಶದ ಮೇರೆಗೆ ಹಾಲಿ ಎಸಿ ಮಂಜುನಾಥ್ ಟಿ.ಆರ್ ಅವರು ದೂರು ನೀಡಿದ್ದರು. ಈ ಸಂಬಂಧ BNS ಸೆಕ್ಷನ್ 318(4), 335, 337, 340(2), 341, 3(5) ಅಡಿ ವಂಚನೆ, ನಕಲಿ ದಾಖಲೆ ಸೃಷ್ಟಿ, ಸರ್ಕಾರಿ ದಾಖಲೆ ತಿರುಚಿದ ಪ್ರಕರಣ ದಾಖಲಾಗಿದೆ.
ಮಹತ್ವದ ವಿಚಾರ ಅಂದರೆ, ಆರೋಪಿತ ದುರ್ಗಾಶ್ರೀ ಅವರು 2011ರ KAS ಬ್ಯಾಚ್ ನ ಅಧಿಕಾರಿ. ನಿನ್ನೆಯಷ್ಟೇ ಸುಪ್ರೀಂ ಕೋರ್ಟ್ 2011ರ 362 KAS ಅಧಿಕಾರಿಗಳ ನೇಮಕಾತಿಯನ್ನು ಅಕ್ರಮ ಎಂದು ರದ್ದು ಮಾಡಿದೆ. ಈ ಬೆನ್ನಲ್ಲೇ ಈಗ ಭೂ ಹಗರಣದ FIR ದಾಖಲಾಗಿರುವುದು ತೀವ್ರ ಸಂಚಲನ ಮೂಡಿಸಿದೆ.





