ಜೋಶಿಗೆ ಕ್ಷಮೆಯಾಚಿಸಿದ ಕರ್ನಾಟಕ ರಾಜ್ಯ ರೈತ ಸಂಘ!
Karnataka State Farmers' Association apologizes to Joshi!

ಹುಬ್ಬಳ್ಳಿ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಕುಟುಂಬದ ಕುರಿತು ರೈತ ಮುಖಂಡ ಶಶಿಕಾಂತ ಗುರೂಜಿ ನೀಡಿದ್ದ ಅವಹೇಳನಕಾರಿ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಇದೀಗ ಕರ್ನಾಟಕ ರಾಜ್ಯ ರೈತ ಸಂಘವು ಕ್ಷಮೆಯಾಚಿಸಿದೆ.
ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದ ರೈತ ಮುಖಂಡ ಶಶಿಕಾಂತ ಗುರೂಜಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಜೋಶಿ ಅವರನ್ನು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಲ್ಲದೆ, ಅವರ ಕುಟುಂಬದ ಕುರಿತು ಅನುಚಿತವಾಗಿ ಮಾತನಾಡಿದ್ದರು. ಗುರೂಜಿ ಅವರ ಹೇಳಿಕೆಯು ರಾಜಕೀಯ ವಲಯ ಹಾಗೂ ಸಚಿವರ ಅಭಿಮಾನಿಗಳಲ್ಲಿ ತೀವ್ರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿತ್ತು.
ಶಶಿಕಾಂತ ಗುರೂಜಿ ಅವರ ಈ ಹೇಳಿಕೆಯು ಸಾರ್ವಜನಿಕವಾಗಿ ಮತ್ತು ಸಂಘಟನೆಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಎಚ್ಚೆತ್ತ ಕರ್ನಾಟಕ ರಾಜ್ಯ ರೈತ ಸಂಘ ಕ್ಷಮೆಯಾಚಿಸಿದೆ. ರಾಜ್ಯ ರೈತ ಸಂಘಟನೆ ರಾಜ್ಯಾಧ್ಯಕ್ಷ ಚೂನ್ನಪ್ಪ ಕ್ಷಮೆಯಾಚಿಸಿ, ಯಾರೂ ಅನ್ಯತಾ ಭಾವಿಸಬೇಡಿ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.




