
ಮುಂಬೈ: ಘಾಟ್ಕೋಪರ್ ಪ್ರದೇಶದ ಚಿರಾಗ್ ನಗರದ ಗೌಸಿಯಾ ಚಾಲ್‌ನಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಇಬ್ಬರು ಮೃತಪಟ್ಟಿದ್ದು, ಅವಶೇಷಗಳಡಿ ಇನ್ನೂ ನಾಲ್ಕರಿಂದ ಐದು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಬುಧವಾರ ಬೆಳಗಿನ ಜಾವ ಸುಮಾರು 3:48ರ ಸುಮಾರಿಗೆ ಗುಡ್ಡದ ಇಳಿಜಾರಿನ ಒಂದು ಭಾಗ ಏಕಾಏಕಿ ಕುಸಿದುಬಿದ್ದಿದೆ. ಇದರ ಪರಿಣಾಮವಾಗಿ ಭಾರೀ ಪ್ರಮಾಣದ ಮಣ್ಣು ಮತ್ತು ಬಂಡೆಗಳು ನೇರವಾಗಿ ಕೆಳಗಿದ್ದ ಎರಡು-ಮೂರು ಮನೆಗಳ ಮೇಲೆ ಅಪ್ಪಳಿಸಿವೆ. ಈ ಅನಿರೀಕ್ಷಿತ ದುರ್ಘಟನೆಯಿಂದ ಸ್ಥಳದಲ್ಲಿ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮುಂಬೈ ಅಗ್ನಿಶಾಮಕ ದಳ, ಸ್ಥಳೀಯ ಪೊಲೀಸರು ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ತುರ್ತು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.
ಸದ್ಯ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದೆ. ಕುಸಿದುಬಿದ್ದ ಮನೆಗಳ ಅವಶೇಷಗಳ ಅಡಿಯಲ್ಲಿ ಇನ್ನೂ ಕೆಲವರು ಸಿಲುಕಿರುವ ಸಾಧ್ಯತೆಯಿದ್ದು, ಅವರ ರಕ್ಷಣೆಗಾಗಿ ಶೋಧ ಮುಂದುವರಿದಿದೆ.