ಪುರಿ ಜಗನ್ನಾಥ ರಥೋತ್ಸವ ವೇಳೆ ಕಾಲ್ತುಳಿತ – 120ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ!
Stampede during Puri Jagannath Rath Yatra – Over 120 devotees taken ill!

ಒಡಿಶಾ : ವಿಶ್ವವಿಖ್ಯಾತ ಪುರಿ ಜಗನ್ನಾಥ ಸ್ವಾಮಿಯ ಪಾರಂಪರಿಕ ರಥೋತ್ಸವದ ವೇಳೆ ಭಾರಿ ಅಚಾತುರ್ಯ ಸಂಭವಿಸಿದೆ. ರಥಯಾತ್ರೆ ವೀಕ್ಷಿಸಲು ಲಕ್ಷಾಂತರ ಭಕ್ತರು ಏಕಕಾಲದಲ್ಲಿ ಕಿಕ್ಕಿರಿದು ಜಮಾಯಿಸಿದ ಪರಿಣಾಮ ಭೀಕರ ಕಾಲ್ತುಳಿತ ಉಂಟಾಗಿದ್ದು, 120ಕ್ಕೂ ಹೆಚ್ಚು ಭಕ್ತರು ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ.
ಸನಾತನ ಪರಂಪರೆಯ ಭವ್ಯ ಸಾಕ್ಷಿಯಾದ ಜಗನ್ನಾಥಸ್ವಾಮಿ, ಬಲಭದ್ರ ಹಾಗೂ ಸುಭದ್ರಾ ದೇವಿಯ ರಥೋತ್ಸವವನ್ನು ಕಣ್ಣುಂಬಿಕೊಳ್ಳಲು ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಪುರಿ ನಗರಕ್ಕೆ ಹರಿದುಬಂದಿದ್ದರು. ರಥದ ಹಗ್ಗವನ್ನು ಎಳೆಯಲು ಮತ್ತು ದೇವರ ದರ್ಶನ ಪಡೆಯಲು ಭಕ್ತರು ಮುಗಿಬಿದ್ದಿದ್ದಾರೆ. ಈ ವೇಳೆ ಉಂಟಾದ ತಳ್ಳಾಟ-ನೂಕಾಟದಿಂದ ಭಾರಿ ಕಾಲ್ತುಳಿತ ಉಂಟಾಗಿದೆ.
ಸ್ಥಳದಲ್ಲಿ ಜನದಟ್ಟಣೆ ಮಿತಿಮೀರಿದ್ದರಿಂದ ಉಸಿರಾಡಲು ಸಾಧ್ಯವಾಗದೆ 120ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಸ್ವಯಂಸೇವಕರು ಮತ್ತು ಅರೆಸೇನಾ ಪಡೆಯ ಸಿಬ್ಬಂದಿ ಅಸ್ವಸ್ಥರನ್ನು ರಕ್ಷಿಸಲು ಹರಸಾಹಸ ಪಟ್ಟರು. ಜನಸಾಗರದ ನಡುವೆಯೇ ರಕ್ಷಣಾ ಸಿಬ್ಬಂದಿ ಅಸ್ವಸ್ಥರನ್ನು ಹೊತ್ತೊಯ್ದು ಆಂಬುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ.