ಜಿಲ್ಲೆ

ತುಂಗಭದ್ರಾ ಡ್ಯಾಂನಲ್ಲಿ ನೀರಿನ ಮಟ್ಟ ಏರಿಕೆ – ಒಂದೇ ದಿನದಲ್ಲಿ 4 ಟಿಎಂಸಿ ನೀರು ಸಂಗ್ರಹ!

Water level rises in Tungabhadra Dam - 4 TMC of water collected in a single day!

ಬಳ್ಳಾರಿ: ಕಲ್ಯಾಣ ಕರ್ನಾಟಕದ ರೈತರ ಪಾಲಿನ ಜೀವನಾಡಿ, ಬರದ ಛಾಯೆಯಲ್ಲಿದ್ದ ತುಂಗಭದ್ರಾ ಜಲಾಶಯಕ್ಕೆ ಕೊನೆಗೂ ಜೀವಕಳೆ ಬಂದಿದೆ. ಜಲಾಶಯದ ಜಲಾನಯನ ಪ್ರದೇಶ ಹಾಗೂ ಮಲೆನಾಡು ಭಾಗದಲ್ಲಿ ಮುಂಗಾರು ಮಳೆ ಆರ್ಭಟಿಸುತ್ತಿರುವುದರಿಂದ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.

ಕಳೆದ ಹಲವು ದಿನಗಳಿಂದ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ, ತುಂಗಭದ್ರಾ ಜಲಾಶಯದತ್ತ ನದಿ ನೀರು ಹರಿದು ಬರುತ್ತಿದೆ. ಕೇವಲ ಕಳೆದ 24 ಗಂಟೆಗಳ ಅವಧಿಯಲ್ಲೇ ಜಲಾಶಯಕ್ಕೆ ಬರೋಬ್ಬರಿ 4.110 ಟಿಎಂಸಿ ನೀರು ಸೇರ್ಪಡೆಯಾಗಿದೆ. ಪ್ರಸ್ತುತ ಜಲಾಶಯಕ್ಕೆ 49,728 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ನೀರಿನ ಮಟ್ಟ ಗಂಟೆಯಿಂದ ಗಂಟೆಗೆ ಏರಿಕೆಯಾಗುತ್ತಿದೆ.

ಕಳೆದ ವರ್ಷ (2025) ಇದೇ ಅವಧಿಯಲ್ಲಿ ಜಲಾಶಯದಲ್ಲಿ 77.343 ಟಿಎಂಸಿ ನೀರು ಸಂಗ್ರಹವಿತ್ತು. ಆದರೆ, ಈ ವರ್ಷ ಮುಂಗಾರು ಮಳೆಯು ಆರಂಭದಲ್ಲಿ ಕೈಕೊಟ್ಟಿದ್ದರಿಂದ ಜಲಾಶಯದ ನೀರಿನ ಮಟ್ಟ ತೀವ್ರವಾಗಿ ಕುಸಿದು, ಜಲಾಶಯ ಬರಿದಾಗಿತ್ತು. ಇದೀಗ ಕಳೆದ ಒಂದು ವಾರದಿಂದ ಮಲೆನಾಡಿನಲ್ಲಿ ಮಳೆರಾಯ ಕೃಪೆ ತೋರಿರುವುದರಿಂದ, ಬತ್ತಿದ್ದ ಜಲಾಶಯದ ಒಡಲು ತುಂಬತೊಡಗಿದೆ.

ರೈತರ ಆತಂಕ ದೂರಾಗುವ ನಿರೀಕ್ಷೆ :

ಮುಂಗಾರು ಮಳೆ ಆರಂಭದಲ್ಲಿ ವಿಳಂಬವಾಗಿದ್ದರಿಂದ ವಿಜಯನಗರ, ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ರೈತರು ಬೆಳೆ ಬೆಳೆಯುವ ವಿಚಾರದಲ್ಲಿ ಆತಂಕದಲ್ಲಿದ್ದರು. ಆದರೆ, ಈಗಿನ ಒಳಹರಿವು ಇದೇ ರೀತಿ ಮುಂದುವರಿದರೆ, ಜಲಾಶಯ ಶೀಘ್ರವೇ ಭರ್ತಿಯಾಗುವ ವಿಶ್ವಾಸವಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ. ಸದ್ಯ ಜಲಾಶಯದಿಂದ ಕುಡಿಯುವ ನೀರು ಮತ್ತು ಇತರೆ ಅಗತ್ಯಗಳಿಗಾಗಿ ಕಾಲುವೆಗಳಿಗೆ ಕೇವಲ 180 ಕ್ಯೂಸೆಕ್ ನೀರನ್ನು ಮಾತ್ರ ಹರಿಸಲಾಗುತ್ತಿದೆ.

Comments (0)

Your email address will not be published. Required fields are marked *

Back to top button