ರಾಜ್ಯದಲ್ಲೇ ಮೊದಲು ಭರ್ತಿಯಾದ ತುಂಗಾ ಡ್ಯಾಂ – 10 ಗೇಟ್ ಮೂಲಕ ನದಿಗೆ ನೀರು ರಿಲೀಸ್!
Tunga Dam becomes the first in the state to fill up; water released into the river through 10 gates!

ಶಿವಮೊಗ್ಗ : ಮಲೆನಾಡು ಭಾಗದಲ್ಲಿ ಮುಂಗಾರು ಮಳೆ ಆರ್ಭಟ ಜೋರಾಗಿದ್ದು, ತೀರ್ಥಹಳ್ಳಿ, ಚಿಕ್ಕಮಗಳೂರು ಹಾಗೂ ಶೃಂಗೇರಿ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತುಂಗಾ ನದಿ ಉಕ್ಕಿ ಹರಿಯುತ್ತಿದೆ. ಶಿವಮೊಗ್ಗ ಜಿಲ್ಲೆಯ ಗಾಜನೂರು ಬಳಿ ಇರುವ ಪ್ರಸಿದ್ಧ ತುಂಗಾ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದೆ. ಈ ವರ್ಷ ರಾಜ್ಯದಲ್ಲೇ ಅತ್ಯಂತ ಮೊದಲು ಭರ್ತಿಯಾದ ಜಲಾಶಯ ಎಂಬ ಹೆಗ್ಗಳಿಕೆಗೆ ತುಂಗಾ ಡ್ಯಾಂ ಪಾತ್ರವಾಗಿದೆ.
ಶಿವಮೊಗ್ಗ ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಮುಂಗಾರು ಮಳೆ ತೀವ್ರಗೊಂಡಿದೆ. ಜಲಾಶಯಕ್ಕೆ ಒಳಹರಿವು ಗಣನೀಯವಾಗಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆಣೆಕಟ್ಟಿನ ಸುರಕ್ಷತೆಯ ದೃಷ್ಟಿಯಿಂದ ಅಧಿಕಾರಿಗಳು ನದಿಗೆ ನೀರನ್ನು ಹರಿಸುತ್ತಿದ್ದಾರೆ. ಸದ್ಯ ಜಲಾಶಯದ ಒಟ್ಟು 10 ಕ್ರಸ್ಟ್ ಗೇಟ್‌ಗಳು ಹಾಗೂ 2 ಸ್ಲೂಯಿಸ್ ಗೇಟ್‌ಗಳ ಮೂಲಕ ತುಂಗಾ ನದಿಗೆ 18,051 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ತುಂಗಾ ಜಲಾಶಯಕ್ಕೆ 20,565 ಕ್ಯೂಸೆಕ್ ಒಳ ಹರಿವು ಇದ್ದು 18,051 ಕ್ಯೂಸೆಕ್ ನೀರನ್ನು ಹೊರ ಬೀಡಲಾಗುತ್ತಿದೆ. 588.24 ಮೀಟರ್ ಗರಿಷ್ಠ ಮಟ್ಟದ ಜಲಾಶಯದ ಸಂಪೂರ್ಣ ಭರ್ತಿಯಾಗಿದ್ದು 3.24 ಟಿಎಂಸಿ ಸಂಗ್ರಹಗೊಂಡಿದೆ.
ಶೃಂಗೇರಿ ಮತ್ತು ತೀರ್ಥಹಳ್ಳಿಯಲ್ಲಿ ಮಳೆಯ ಪ್ರಮಾಣ ಹೀಗೆಯೇ ಮುಂದುವರಿದರೆ ಜಲಾಶಯಕ್ಕೆ ಒಳಹರಿವು ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.




