ತಡರಾತ್ರಿವರೆಗೂ ಸಚಿವ ಕೃಷ್ಣ ಭೈರೇಗೌಡ ಸಿಟಿ ರೌಂಡ್ಸ್ – ಅಧಿಕಾರಿಗಳಿಗೆ ತರಾಟೆ!
Minister Krishna Bhairegowda makes city rounds till late at night - scolds officials!

ಬೆಂಗಳೂರು : ಸಚಿವ ಕೃಷ್ಣ ಭೈರೇಗೌಡ ಅವರು ತಡರಾತ್ರಿವರೆಗೂ ಸಿಟಿ ರೌಂಡ್ಸ್ ಕೈಗೊಂಡು ಹಲವು ಕಡೆಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸರಿಯಾಗಿ ಕರ್ತವ್ಯನಿರ್ವಹಿಸದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಚಿವ ಕೃಷ್ಣ ಭೈರೇಗೌಡ ಅವರು ಮಹದೇವಪುರದ ಲೌರಿ ಸರ್ಕಲ್‌ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ತನಕ ರಸ್ತೆಯ ಎರಡು ಕಡೆಗಳಲ್ಲಿ ಪರಿಶೀಲನೆ ನಡೆಸಿದರು. ರಾತ್ರಿ 10:30ವರೆಗೆ ಶುರುವಾದ ರೌಂಡ್ಸ್ ತಡರಾತ್ರಿ 2:30ರ ತನಕ ನಡೆಯಿತು. ಈ ವೇಳೆ ಎಲ್ಲಾ ಇಲಾಖೆಯ ಹಿರಿಯ ಮತ್ತು ಕಿರಿಯ ಅಧಿಕಾರಿಗಳು ಹಾಜರಿದ್ದು, ಅವ್ಯವಸ್ಥೆಗಳ ವಿರುದ್ಧ ಸ್ಥಳದಲ್ಲೇ ಸಚಿವರು ಕ್ಲಾಸ್ ತಗೊಂಡು ಸರಿಯಾಗಿ ಕೆಲಸ ಮಾಡುವಂತೆ ಎಚ್ಚರಿಕೆ ಕೊಟ್ಟಿದ್ದಾರೆ.
ಇದೇ ವೇಳೆ ಮಾತನಾಡಿದ ಸಚಿವರು, ನಾವು ಫುಟ್‌ಪಾತ್ ಮೇಲೆ ವ್ಯಾಪಾರ ಮಾಡಬೇಡಿ ಎಂದು ಹೇಳಿಲ್ಲ. ಆದರೆ, ಮುಖ್ಯ ರಸ್ತೆಗಳಲ್ಲಿ ವ್ಯಾಪಾರ ಮಾಡುವುದು ಸರಿಯಲ್ಲ. ಪಕ್ಕದ ರಸ್ತೆಗಳಲ್ಲಿ ವ್ಯಾಪಾರ ಮಾಡಿಕೊಳ್ಳಿ ಎಂದು ಅವರು ಸಲಹೆ ನೀಡಿದರು.
ಪಾದಚಾರಿಗಳ ಸುರಕ್ಷತೆಯ ಕುರಿತು ಗಂಭೀರ ಆತಂಕ ವ್ಯಕ್ತಪಡಿಸಿದ ಸಚಿವರು, ಪ್ರತಿ ವರ್ಷ 300 ಜನ ಫುಟ್ ಪಾತ್ ನಿಂದ ಮೃತಪಡುತ್ತಿದ್ದಾರೆ. ಇದಕ್ಕೆಲ್ಲ ಯಾರು ಉತ್ತರ ಕೊಡುತ್ತಾರೆ? ಒಂದು ವೇಳೆ ನಿಮ್ಮ ಮನೆಯವರೇ ಈ ರೀತಿ ಮೃತಪಟ್ಟಿದ್ದರೆ ನೀವು ಏನು ಮಾಡ್ತಾಯಿದ್ರೀ? ಎಂದು ಪ್ರಶ್ನಿಸಿದರು.
ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ನಗರದಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗದಂತೆ ತಡೆಯಲು ರಾಜಕಾಲುವೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಮಾಡ್ಲಾಗ್ತಿದೆ ಎಂದು ಕೃಷ್ಣ ಭೈರೇಗೌಡ ಹೇಳಿದರು.




