ಮಾತೃತ್ವ ಗೌರವಿಸಿ, ದ್ವೇಷ ಬೇಡ- WFIಗೆ ಹೈಕೋರ್ಟ್ ಚಾಟಿ!
Delhi High court slames WFI on VInesh phogat issue

ನವದೆಹಲಿ: ಭಾರತೀಯ ಕುಸ್ತಿ ಒಕ್ಕೂಟ (WFI) ದ್ವೇಷದ ರಾಜಕಾರಣಕ್ಕಾಗಿ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ‘ಅನರ್ಹ’ ಎಂದು ಘೋಷಿಸಿದ್ದ ನಿರ್ಧಾರಕ್ಕೆ ದೆಹಲಿ ಹೈಕೋರ್ಟ್ ಕತ್ತರಿ ಹಾಕಿದೆ. ಮುಂಬರುವ ಮೇ 30 ಮತ್ತು 31ರಂದು ನಡೆಯಲಿರುವ 2026ರ ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ವಿನೇಶ್ ಫೋಗಟ್ ಭಾಗಿತ್ವದ ಮಾಹಿತಿ ಖಚಿತಪಡಿಸುವಂತೆ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಮಹತ್ವದ ಆದೇಶ ನೀಡಿದೆ.

‘ದ್ವೇಷದ ರಾಜಕಾರಣ’ಕ್ಕೆ ಹೈಕೋರ್ಟ್ ಗರಂ!
ಕುಸ್ತಿ ಒಕ್ಕೂಟದ ಆಂತರಿಕ ಭಿನ್ನಾಭಿಪ್ರಾಯಗಳು ಹಾಗೂ ವೈಯಕ್ತಿಕ ದ್ವೇಷಗಳಿಂದಾಗಿ ದೇಶದ ಹೆಮ್ಮೆಯ ಕ್ರೀಡಾಪಟುಗಳ ವೃತ್ತಿಜೀವನಕ್ಕೆ ಧಕ್ಕೆಯಾಗಬಾರದು ಎಂದು ಮುಖ್ಯ ನ್ಯಾಯಮೂರ್ತಿಗಳನ್ನೊಳಗೊಂಡ ಪೀಠವು WFI ಗೆ ತೀವ್ರ ತರಾಟೆಗೆ ತೆಗೆದುಕೊಂಡಿದೆ. ವಿನೇಶ್ ಫೋಗಟ್ ಅವರನ್ನು ಟ್ರಯಲ್ಸ್‌ನಿಂದ ಹೊರಗಿಡಲು ಕೊನೆಯ ಕ್ಷಣದಲ್ಲಿ ಹಳೆಯ ಆಯ್ಕೆ ಮಾನದಂಡಗಳನ್ನು ದಿಢೀರ್ ಬದಲಾಯಿಸಿರುವುದರ ಹಿಂದೆ ‘ದ್ವೇಷದ ರಾಜಕಾರಣ’ ಅಡಗಿದೆ ಎಂದು ನ್ಯಾಯಾಲಯ ಖಾರವಾಗಿ ನುಡಿದಿದೆ. ವಿನೇಶ್ ಅವರ ಪ್ರಕರಣವನ್ನು ಮರುಪರಿಶೀಲಿಸಲು ಮತ್ತು ಅವರು ಟ್ರಯಲ್ಸ್‌ನಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿಕೊಳ್ಳಲು ವಿಶೇಷ ತಜ್ಞರ ಸಮಿತಿಯನ್ನು (Expert Committee) ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಕೋರ್ಟ್ ಆದೇಶಿಸಿದೆ.
ತಾಯ್ತನ ಹೆಮ್ಮೆ, ಕ್ರೀಡಾಪಟುವಿಗೆ ಮಾರಕವಾಗಬಾರದು!
ಜುಲೈ 2025 ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ವಿನೇಶ್ ಫೋಗಟ್, ಹೆರಿಗೆಯ ನಂತರದ ಚೇತರಿಕೆಯ ಕಾರಣದಿಂದಾಗಿ ಕೆಲವು ದೇಶೀಯ ಪಂದ್ಯಾವಳಿಗಳನ್ನು ಮಿಸ್ ಮಾಡಿಕೊಂಡಿದ್ದರು. ಇದನ್ನೇ ನೆಪವಾಗಿಸಿಕೊಂಡು WFI ಅವರನ್ನು ಫೆಡರೇಷನ್ ನಿಂದ ಹೊರ ಹಾಕಲು ಸಂಚು ರೂಪಿಸಿತ್ತು. ಈ ಧೋರಣೆಯನ್ನುಹೈಕೋರ್ಟ್ ಖಂಡಿಸಿದೆ.
“ನಮ್ಮ ದೇಶದಲ್ಲಿ ತಾಯ್ತನವನ್ನು ಸಂಭ್ರಮಿಸಲಾಗುತ್ತದೆ ಮತ್ತು ಹೆಮ್ಮೆಯಿಂದ ಕೊಂಡಾಡಲಾಗುತ್ತದೆ. ಆದರೆ ಅದನ್ನೇ ಒಬ್ಬ ಅಂತರರಾಷ್ಟ್ರೀಯ ಮಟ್ಟದ ಹೆಮ್ಮೆಯ ಕ್ರೀಡಾಪಟುವಿನ ವೃತ್ತಿಜೀವನ ಮುಗಿಸಲು ಅಥವಾ ಮೂಲೆಗುಂಪು ಮಾಡಲು ಬಳಸಿಕೊಳ್ಳಬಾರದು. ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ, ಅದರಿಂದ ಕ್ರೀಡೆಗೆ ನಷ್ಟ” ಎಂದು ದೆಹಲಿ ಹೈಕೋರ್ಟ್ ಸ್ಪಷ್ಟಪಡಿಸಿದೆ. ಅಲ್ಲದೆ, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿನೇಶ್ ಫೋಗಟ್ ಅವರು ತೂಕದ ಸಮಸ್ಯೆಯಿಂದಾಗಿ ಅನರ್ಹಗೊಂಡಿದ್ದನ್ನು ಫೆಡರೇಶನ್ ತನ್ನ ನೋಟಿಸ್‌ನಲ್ಲಿ “ರಾಷ್ಟ್ರೀಯ ಅವಮಾನ” ಎಂದು ಕರೆದಿರುವುದಕ್ಕೆ ನ್ಯಾಯಾಲಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಕುತಂತ್ರ ಹೆಣೆದಿದ್ದ WFI
ಕಳೆದ 2023 ರಲ್ಲಿ ಅಂದಿನ WFI ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ನಡೆದ ಲೈಂಗಿಕ ಕಿರುಕುಳ ವಿರೋಧಿ ಪ್ರತಿಭಟನೆಯಲ್ಲಿ ವಿನೇಶ್ ಫೋಗಟ್ ಮುಂದೆ ನಿಂತು ಪ್ರತಿಭಟಿಸಿದ್ದರು. ಅಂದಿನಿಂದಲೇ ಅವರನ್ನು ಮುಗಿಸಲು ಗುರಿಯಿಡಲಾಗಿದೆ ಎಂಬ ಆರೋಪ ಇತ್ತು.
ಶೋಕಾಸ್ ನೋಟಿಸು- ಶಿಸ್ತು ಉಲ್ಲಂಘನೆ ಮತ್ತು ನಿವೃತ್ತಿಯ ನಂತರ ಮರಳಿ ಬರುವ ಆರು ತಿಂಗಳ ಮುನ್ಸೂಚನೆ ಅವಧಿಯ ನಿಯಮ ಉಲ್ಲೇಖಿಸಿ ಮೇ 9 ರಂದು WFI ವಿನೇಶ್‌ಗೆ 15 ಪುಟಗಳ ಶೋಕಾಸ್ ನೋಟಿಸ್ ನೀಡಿ, ಜೂನ್ 2026 ರವರೆಗೆ ಸ್ಪರ್ಧಿಸದಂತೆ ತಡೆ ಹೇರಿತ್ತು.ಡಿಸೆಂಬರ್ 2025 ರಲ್ಲಿ ವಿನೇಶ್ ನಿವೃತ್ತಿ ಹಿಂಪಡೆದಾಗ, ಕೇವಲ ಇತ್ತೀಚಿನ ಕ್ರೀಡಾಕೂಟಗಳ ಪದಕ ವಿಜೇತರಿಗೆ ಮಾತ್ರ ಏಷ್ಯನ್ ಗೇಮ್ಸ್ ಟ್ರಯಲ್ಸ್‌ನಲ್ಲಿ ಅವಕಾಶ ಎಂದು WFI ಹೊಸ ನಿಯಮ ತಂದಿತ್ತು. ಇದು ಕೇವಲ ಗರ್ಭಾವಸ್ಥೆಯ ಕಾರಣಕ್ಕೆ ವಿರಾಮ ತೆಗೆದುಕೊಂಡಿದ್ದ ವಿನೇಶ್ ಅವರನ್ನು ಹೊರದಬ್ಬುವ ಕುತಂತ್ರವಾಗಿತ್ತು.
ಇದನ್ನು ಪ್ರಶ್ನಿಸಿ ವಿನೇಶ್ ಮೇ 14 ರಂದು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಸದ್ಯ ಹೈಕೋರ್ಟ್ ಈ ಇಡೀ ವಿವಾದದ ಮುಂದಿನ ವಿಚಾರಣೆಯನ್ನು ಜುಲೈ 6, 2026 ಕ್ಕೆ ನಿಗದಿಪಡಿಸಿದ್ದು, ಅಷ್ಟರೊಳಗೆ ಶೋಕಾಸ್ ನೋಟಿಸ್‌ಗೆ ವಿನೇಶ್ ಸಲ್ಲಿಸುವ ಉತ್ತರವನ್ನು ಪರಿಶೀಲಿಸಿ, ನ್ಯಾಯಸಮ್ಮತ ನಿರ್ಧಾರ ಕೈಗೊಳ್ಳುವಂತೆ WFIಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.:
#VineshPhogat #DelhiHighCourt #WFI #WrestlingIndia #AsianGames2026 #JusticeForVinesh #Motherhood #SportsPolitics #VineshPhogatWin #FreedomTV #FreedomTVNews #KannadaNews




