
ಮೈಸೂರು: “ರಾಜ್ಯದ ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡಗಳ (ST) ಸಮುದಾಯಕ್ಕೆ ಸರಣಿ ವಂಚನೆ ಮಾಡುತ್ತಿದೆ. ಬಿಜೆಪಿ ಸರ್ಕಾರ ಶ್ರಮಪಟ್ಟು ಹೆಚ್ಚಿಸಿದ್ದ ಮೀಸಲಾತಿಯನ್ನು ಕಸಿದುಕೊಳ್ಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಅನ್ಯಾಯವೆಸಗುತ್ತಿದ್ದಾರೆ” ಎಂದು ಮಾಜಿ ಸಚಿವರಾದ ಬಿ. ಶ್ರೀರಾಮುಲು ಹಾಗೂ ಸಿ.ಟಿ. ರವಿ ಜಂಟಿ ಸುದ್ದಿಗೋಷ್ಠಿಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಉಭಯ ನಾಯಕರು, ಸಿದ್ದರಾಮಯ್ಯ ಸರ್ಕಾರದ ದಲಿತ ವಿರೋಧಿ ನೀತಿಗಳ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದರು.

30 ವರ್ಷಗಳಿಂದ ಆಗದ ಸಾಧನೆ ಮಾಡಿದ್ದು ಬಿಜೆಪಿ!
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಬಿ. ಶ್ರೀರಾಮುಲು, “ಒಳಮೀಸಲಾತಿಗಾಗಿ ನಮ್ಮ ಸಮುದಾಯಗಳು ಕಳೆದ 30 ವರ್ಷಗಳಿಂದ ಹೋರಾಟ ನಡೆಸುತ್ತಿವೆ. ಈ ಹಿಂದೆ ಸಿದ್ದರಾಮಯ್ಯ ಅವರು ಎರಡು ಅವಧಿಗೆ ಸಿಎಂ ಆಗಿದ್ದಾಗಲೂ ಎಸ್‌ಸಿ-ಎಸ್‌ಟಿ ಸಮುದಾಯಕ್ಕೆ ಏನೂ ಮಾಡಲಿಲ್ಲ. ಅವರು ಕೇವಲ ಸ್ವಯಂ ಘೋಷಿತ ಹಿಂದುಳಿದ ಸಮುದಾಯದ ನಾಯಕ” ಎಂದು ಛೇಡಿಸಿದರು.
“2019ರಲ್ಲಿ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ನ್ಯಾಯಮೂರ್ತಿ ನಾಗಮೋಹನ ದಾಸ್ ಸಮಿತಿ ರಚನೆಯಾಗಿತ್ತು. ಆ ಸಮಿತಿ 2022ರಲ್ಲಿ ವರದಿ ನೀಡಿದಾಗ, 30 ವರ್ಷಗಳಿಂದ ಯಾರೂ ಮಾಡದ ಧೈರ್ಯದ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿತು. ಎಸ್‌ಸಿ ಸಮುದಾಯದ ಮೀಸಲಾತಿಯನ್ನು ಶೇ. 15 ರಿಂದ ಶೇ.17 ಕ್ಕೆ ಹಾಗೂ ಎಸ್‌ಟಿ ಸಮುದಾಯದ ಮೀಸಲಾತಿಯನ್ನು ಶೇ.3 ರಿಂದ ಶೇ.7 ಕ್ಕೆ ಹೆಚ್ಚಳ ಮಾಡಿದ್ದು ನಮ್ಮ ಬಿಜೆಪಿ ಸರ್ಕಾರ! ಆಗ ಸರ್ವಪಕ್ಷ ಸಭೆಯಲ್ಲಿ ಸಿದ್ದರಾಮಯ್ಯ ಅವರೂ ಇದಕ್ಕೆ ಬೆಂಬಲ ಸೂಚಿಸಿದ್ದರು. ಆದರೆ ಈಗ ಅವರೇ ಮೀಸಲಾತಿಯಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ” ಎಂದು ಕಿಡಿಕಾರಿದರು.
“ನಮ್ಮ ಸರ್ಕಾರ ಎಸ್‌ಸಿ-ಎಸ್‌ಟಿ ಪರ ನಿಂತರೂ ನಾನು ಎರಡು ಚುನಾವಣೆಯಲ್ಲಿ ಸೋತೆ, ಅದು ನನಗೆ ತೀವ್ರ ನೋವು ತಂದಿದೆ. ಕಾಂಗ್ರೆಸ್ ನರಿ ಬುದ್ಧಿಯ ಪಕ್ಷ. ನಾವು ಕೊಟ್ಟ ಮೀಸಲಾತಿಯಿಂದ ಎಷ್ಟೋ ಬಡ ಮಕ್ಕಳು ನೀಟ್ (NEET) ಓದಿ ವೈದ್ಯರಾಗಿದ್ದಾರೆ. ಅದನ್ನು ಸಹಿಸದ ಕಾಂಗ್ರೆಸ್ ಈಗ ಕೋರ್ಟ್ ಮೆಟ್ಟಿಲೇರಿದೆ. ಮುಖ್ಯಮಂತ್ರಿಗಳಿಗೆ ನಿಜವಾಗಿಯೂ ಸಮುದಾಯದ ಮೇಲೆ ಪ್ರೀತಿ ಇದ್ದರೆ, ಹೈಕೋರ್ಟ್ ನೀಡಿರುವ ತಾತ್ಕಾಲಿಕ ತಡೆಯಾಜ್ಞೆಯನ್ನು ತೆರವುಗೊಳಿಸಲಿ. ನೀವು ಮಾಡದಿದ್ದರೆ 2028ಕ್ಕೆ ನಾವು ಅಧಿಕಾರಕ್ಕೆ ಬಂದು ಇದನ್ನು ಸರಿಪಡಿಸುತ್ತೇವೆ” ಎಂದು ಶ್ರೀರಾಮುಲು ಸವಾಲು ಹಾಕಿದರು.
ಮುಸ್ಲಿಂ ಮೀಸಲಾತಿಗೆ ಕಡಿತವಿಲ್ಲ-ಎಸ್‌ಸಿ-ಎಸ್‌ಟಿಗೇಕೆ ಕತ್ತರಿ!
ಮಾಜಿ ಸಚಿವ ಸಿ.ಟಿ. ರವಿ, “ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರು ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿ ನೀಡಬೇಕು. ಎಸ್‌ಸಿ-ಎಸ್‌ಟಿ ಮೀಸಲಾತಿ ಕಡಿತಗೊಳಿಸಿರುವುದು ಅಪ್ಪಟ ಸಾಮಾಜಿಕ ಅನ್ಯಾಯ. ಸುಪ್ರೀಂಕೋರ್ಟ್‌ನ ಶೇ. 50ರ ಮಿತಿ ಇದೆ ಎಂದು ನೆಪ ಹೇಳುವ ಸರ್ಕಾರಕ್ಕೆ ನನ್ನದೊಂದು ಪ್ರಶ್ನೆ ಮುಸ್ಲಿಂ ಸಮುದಾಯವನ್ನು ನೀವು ಜಾತಿ ಎನ್ನುತ್ತೀರೋ ಅಥವಾ ಧರ್ಮ ಎನ್ನುತ್ತೀರೋ? ಶೇ. 50ರ ಒಳಗೇ ಮೀಸಲಾತಿ ಇರಬೇಕೆಂದಿದ್ದರೆ, ಸಂವಿಧಾನಬಾಹಿರವಾಗಿ ಮುಸ್ಲಿಮರಿಗೆ ನೀಡಿರುವ ಮೀಸಲಾತಿಯನ್ನು ಕಡಿತಗೊಳಿಸಬೇಕಿತ್ತೇ ಹೊರತು ಎಸ್‌ಸಿ-ಎಸ್‌ಟಿ ಸಮುದಾಯದ್ದನ್ನಲ್ಲ” ಎಂದು ಗುಡುಗಿದರು.
ಮೋದಿ ಪ್ರವಾಸ ಮೋಜು-ಮಸ್ತಿಗಲ್ಲ!
ಜಾಗತಿಕ ವಿದ್ಯಮಾನಗಳು ಹಾಗೂ ಪ್ರಧಾನಿ ಮೋದಿ ಅವರ ವಿದೇಶ ಪ್ರವಾಸದ ಕುರಿತು ಮಾತನಾಡಿದ ಸಿ.ಟಿ. ರವಿ, “ಇಂದು ಜಗತ್ತಿನಲ್ಲಿ ನಡೆಯುತ್ತಿರುವ ಯುದ್ಧಗಳನ್ನು ಭಾರತ ಬಯಸಿರಲಿಲ್ಲ. ಆದರೆ ಅದರ ಆರ್ಥಿಕ ದುಷ್ಪರಿಣಾಮ ದೇಶದ ಮೇಲಾಗುತ್ತಿದೆ. ಪ್ರಧಾನಿ ಮೋದಿ ಅವರು ಮೋಜು-ಮಸ್ತಿ ಮಾಡಲು ವಿದೇಶಕ್ಕೆ ಹೋಗುತ್ತಿಲ್ಲ, ದೇಶದ ಹಿತಾಸಕ್ತಿ ಕಾಯಲು ಮತ್ತು ಭಾರತಕ್ಕೆ ಕೆಟ್ಟ ಪರಿಸ್ಥಿತಿ ಬರದಂತೆ ನೋಡಿಕೊಳ್ಳಲು ಪ್ರವಾಸ ಮಾಡುತ್ತಿದ್ದಾರೆ.ದೇಶದ ಹಿತದೃಷ್ಟಿಯಿಂದ ಚಿನ್ನ ಖರೀದಿ ಕಡಿಮೆ ಮಾಡಿ, ಪೆಟ್ರೋಲ್-ಡೀಸೆಲ್ ಮಿತವಾಗಿ ಬಳಸಿ ಎಂದು ದೇಶದ ಜನತೆಗೆ ಕರೆ ನೀಡಿದ್ದಾರೆ. ಆದರೆ ಕಾಂಗ್ರೆಸ್‌ನವರು ಸದಾ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ” ಎಂದು ತಿವಿದರು.
#BSRiramulu #CTRavi #Mysuru #BJPNews #CongressSarkar #SCSTReservation #InternalReservation #Siddaramaiah #KarnatakaPolitics #ReservationControversy #NarendraModi #FreedomTV #BreakingNews




