ಪ್ರದೀಪ್ ಈಶ್ವರ್ ಕ್ಷೇತ್ರದಲ್ಲಿ ಹಳ್ಳಿಗಳ ಸ್ಥಿತಿ ಅಯೋಮಯ!
infrastructure problem in Bachchenahalli chikkaballapur pradeep eshwar constituency

ಚಿಕ್ಕಬಳ್ಳಾಪುರ: ಸದಾ ವೇದಿಕೆಗಳ ಮೇಲೆ ಅಭಿವೃದ್ಧಿಯ ಮಂತ್ರ ಜಪಿಸುವ, ಕ್ಯಾಮೆರಾಗಳ ಮುಂದೆ ಭಾಷಣ ಬಿಗಿಯುವ ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರ ಕ್ಷೇತ್ರದಲ್ಲಿನ ಹಳ್ಳಿಗಳು ಈಗ ನರಕಸದೃಶವಾಗಿ ಮಾರ್ಪಟ್ಟಿವೆ. ತಾಲೂಕಿನ ಮಂಡಿಕಲ್ಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಚ್ಚೇನಹಳ್ಳಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲದೆ ಜನ ತತ್ತರಿಸಿ ಹೋಗಿದ್ದಾರೆ. ಕ್ಷೇತ್ರದಲ್ಲಿದ್ದಾಗ ಪ್ರತಿದಿನ ಮನೆ ಮನೆಗೆ ಭೇಟಿ ನೀಡಿ ಸಮಸ್ಯೆ ಆಲಿಸುತ್ತಿದ್ದ ಶಾಸಕರು, ಕಳೆದ ಒಂದೂವರೆ ತಿಂಗಳಿಂದ ಕ್ಷೇತ್ರದಿಂದಲೇ ನಾಪತ್ತೆಯಾಗಿದ್ದಾರೆ. ಅಷ್ಟೇ ಅಲ್ಲದೆ, ಕ್ಷೇತ್ರದಲ್ಲಿ ಇದ್ದಂತಹ ಅವರ ಬಾಡಿಗೆ ಮನೆಯನ್ನು ಖಾಲಿ ಮಾಡಿ ಬೆಂಗಳೂರಿಗೆ ಶಿಫ್ಟ್ ಆಗಿದ್ದಾರೆ ಎಂದು ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆ ಇಲ್ಲ- ಚರಂಡಿಯೂ ಇಲ್ಲ – ಬಚ್ಚೇನಹಳ್ಳಿ ಕಣ್ಣೀರಿನ ಕಥೆ!
ಕಳೆದ 20 ವರ್ಷಗಳಿಂದ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಬಚ್ಚೇನಹಳ್ಳಿಗೆ ಮಳೆ ಬಂದರೆ ಗ್ರಾಮಸ್ಥರ ಪರಿಸ್ಥಿತಿ ಹೇಳತೀರದು.ಎಲ್ಲರೂ ಮಳೆ ಬಂದರೆ ಹರ್ಷಿಸುತ್ತಾರೆ ಆದರೆ ಬಚ್ಚೇನಹಳ್ಳಿಯವರು ಮಳೆ ಬರೋದೇ ಬೇಡ ಎನ್ನುತ್ತಾರೆ. ಕಾರಣ ಗ್ರಾಮದಲ್ಲಿ ಓಡಾಡಲು ಸರಿಯಾದ ರಸ್ತೆಗಳಿಲ್ಲ,ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆಯೂ ಇಲ್ಲ. ಮಳೆ ಬಂದರೆ ಸಾಕು ಇಡೀ ಗ್ರಾಮದ ರಸ್ತೆಗಳು ಕೆಸರು ಗದ್ದೆಗಳಾಗಿ ಮಾರ್ಪಡುತ್ತಿವೆ. ಚರಂಡಿ ಇಲ್ಲದ ಕಾರಣ ಇಡೀ ಗ್ರಾಮದ ಗಲೀಜು ನೀರೆಲ್ಲಾ ಜನರ ಮನೆಗಳ ಮುಂಭಾಗದಲ್ಲೇ ಹರಿಯುತ್ತಿದ್ದು,ಇಡೀ ಗ್ರಾಮ ದುರ್ವಾಸನೆಯಿಂದ ಕೂಡಿದೆ. ಇದರಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿ ಗ್ರಾಮಸ್ಥರು ಜೀವ ಕೈಯಲ್ಲಿ ಹಿಡಿದು ಬದುಕುತ್ತಿದ್ದಾರೆ.
ಶಿವಾನಂದ್ ಅಸಮರ್ಥ ಪಿಡಿಒ– ಸಾರ್ವಜನಿಕರ ಆಕ್ರೋಶ!
ಗ್ರಾಮದ ಈ ನರಕಯಾತನೆಯ ಕುರಿತು ಮಂಡಿಕಲ್ಲು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (PDO) ಶಿವಾನಂದ್ ಅವರಿಗೆ ಸಾರ್ವಜನಿಕರು ಮತ್ತು ಗ್ರಾಮಸ್ಥರು ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.ಅಧಿಕಾರಿಗಳ ಈ ಬೇಜವಾಬ್ದಾರಿತನ ಮತ್ತು ಉದಾಸೀನದ ವಿರುದ್ಧ ಗ್ರಾಮಸ್ಥರು “ನಾಲಾಯಕ್ ಪಿಡಿಒ” ಎಂದು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
“ಜನರಿಂದ ಓಟು ಪಡೆದ ಶಾಸಕರೇ ನಾಪತ್ತೆ . ಕ್ಷೇತ್ರದಲ್ಲಿ ಇರದೆ ಜನರ ಸಮಸ್ಯೆಗಳನ್ನು ಆಲಿಸುತ್ತಿಲ್ಲ ಇನ್ನು ಅಧಿಕಾರಿಗಳು ನಮ್ಮ ಸಮಸ್ಯೆ ಬಗೆಹರಿಸುತ್ತಾರಾ? ಶಾಸಕರು ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತ” ಎಂದು ನೊಂದ ಹಳ್ಳಿಗರು ಪ್ರಶ್ನಿಸುತ್ತಿದ್ದಾರೆ.
ಒಟ್ಟಾರೆಯಾಗಿ ಬಚ್ಚೇನಹಳ್ಳಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಸಾರ್ವಜನಿಕರು ತತ್ತರಿಸಿದ್ದು, ಸದಾ ಸುದ್ದಿಯಲ್ಲಿರುವ ಶಾಸಕ ಪ್ರದೀಪ್ ಈಶ್ವರ್ ಅವರು ಸೋಷಿಯಲ್ ಮೀಡಿಯಾ ಬಿಟ್ಟು, ತಮ್ಮ ಕ್ಷೇತ್ರದ ಹಳ್ಳಿಗಳ ಕಡೆಗೆ ಗಮನ ಹರಿಸಿ ತಕ್ಷಣವೇ ಸಮಸ್ಯೆ ಬಗೆಹರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
#Chikkaballapur #PradeepEshwar #MandikalluPanchayat #Bacchenahalli #NoRoadNoDrainage #PublicOutrage #KarnatakaMLA #BasicAmenities #LocalIssues #RuralKarnataka #FreedomTV #BreakingNews