ದೇಶ/ವಿದೇಶ

ಆನ್ ಲೈನ್ ಫಾರ್ಮಸಿ ವಿರುದ್ಧ ಆಕ್ರೋಶ- ದೇಶದೆಲ್ಲೆಡೆ ಮೆಡಿಕಲ್ ಶಾಪ್ ಬಂದ್!

Medical shops bandh against e-pharmacy

ಬೆಂಗಳೂರು: ಆನ್‌ಲೈನ್ ಇ-ಫಾರ್ಮಸಿಗಳು ಮತ್ತು ಕ್ವಿಕ್ ಕಾಮರ್ಸ್ ಆಪ್‌ಗಳ ಮೂಲಕ ನಿಯಮಬಾಹಿರವಾಗಿ ಔಷಧಿ ಮಾರಾಟ ಮಾಡುತ್ತಿರುವುದನ್ನು ಖಂಡಿಸಿ, ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ (AIOCD) ಕರೆ ನೀಡಿದ್ದ ದೇಶಾದ್ಯಂತ ಮೆಡಿಕಲ್ ಶಾಪ್ ಬಂದ್ ಪ್ರತಿಭಟನೆಗೆ ಕರ್ನಾಟಕದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ರಾಜ್ಯ ಔಷಧಿ ಮಾರಾಟ ವ್ಯಾಪಾರಿಗಳ ಸಂಘದ ನೇತೃತ್ವದಲ್ಲಿ ನಡೆದ ಈ ಬಂದ್‌ನಿಂದಾಗಿ ಕರ್ನಾಟಕದಾದ್ಯಂತ ಸಾವಿರಾರು ಮೆಡಿಕಲ್ ಸ್ಟೋರ್‌ಗಳು ಬಾಗಿಲು ಮುಚ್ಚಿದ್ದವು.

ರಾಜಧಾನಿಯಲ್ಲಿ ಮಿಶ್ರ ಪ್ರತಿಕ್ರಿಯೆ ಆದ್ರೂ ಬಂದ್ ಯಶಸ್ವಿ!


ಬೆಂಗಳೂರು ನಗರವೊಂದರಲ್ಲೇ 3,000ಕ್ಕೂ ಹೆಚ್ಚು ಮೆಡಿಕಲ್ ಶಾಪ್‌ಗಳು ಬಂದ್ ಆಗಿದ್ದವು. ಬೆಂಗಳೂರು ಫಾರ್ಮ್ ರಿಟೈಲರ್ಸ್ & ಡಿಸ್ಟ್ರಿಬ್ಯೂಟರ್ಸ್ ಫೋರಂನಿಂದ ಹೊರಬಂದ ಕೆಲವರು ಪ್ರತ್ಯೇಕ ಸಂಘಟನೆ ಕಟ್ಟಿಕೊಂಡು ಬಂದ್‌ಗೆ ವಿರೋಧ ವ್ಯಕ್ತಪಡಿಸಿದ್ದರಾದರೂ, ಬಹುತೇಕ ವೈಯಕ್ತಿಕ ಮೆಡಿಕಲ್ ಮಾಲೀಕರು ಸ್ವಯಂಪ್ರೇರಿತರಾಗಿ ವ್ಯಾಪಾರ ಸ್ಥಗಿತಗೊಳಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.ಮೆಡಿಕಲ್ ಬಂದ್‌ನಿಂದಾಗಿ ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ತುರ್ತು ಸಂದರ್ಭದಲ್ಲಿ ತೊಂದರೆಯಾಗದಂತೆ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಒಳಗೆ ಇರುವ ಫಾರ್ಮಸಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು.ಅತ್ಯಗತ್ಯ ಮತ್ತು ತುರ್ತು ಔಷಧಿಗಳ ಪೂರೈಕೆಗಾಗಿ ಆಯ್ದ ಪ್ರಮುಖ ಕೇಂದ್ರಗಳಲ್ಲಿ ‘ವಿಶೇಷ ತುರ್ತು ಕೌಂಟರ್‌ಗಳನ್ನು’ ತೆರೆಯಲಾಗಿತ್ತು.

ಕಲ್ಯಾಣ ಕರ್ನಾಟಕದಲ್ಲೂ ಬಂದ್ ಬಿಸಿ ಜೋರು!
ಬಂದ್‌ನ ಬಿಸಿ ರಾಜಧಾನಿ ಬೆಂಗಳೂರು ಮಾತ್ರವಲ್ಲದೆ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಭಾಗಗಳಲ್ಲೂ ತಟ್ಟಿದೆ.ವಿಜಯನಗರದ ಹೊಸಪೇಟೆಯಲ್ಲಿ ರಿಯಾಯಿತಿ ದರದಲ್ಲಿ ಆನ್‌ಲೈನ್ ಔಷಧಿ ಮಾರಾಟ ಮಾಡುವುದನ್ನು ಖಂಡಿಸಿ ಮೆಡಿಕಲ್ ಸ್ಟೋರ್ ಮಾಲೀಕರು ಬೀದಿಗಿಳಿದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮೆಡಿಕಲ್ ಶಾಪ್ ಮಾಲೀಕರು ‘ಮೌನ ಪ್ರತಿಭಟನೆ’ ನಡೆಸಿದರು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ, ಆನ್‌ಲೈನ್ ಮೆಡಿಸಿನ್ ದಂಧೆಗೆ ಬ್ರೇಕ್ ಹಾಕುವಂತೆ ಒತ್ತಾಯಿಸಿದರು. ಬೀದರ್ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ವತಿಯಿಂದ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಬೃಹತ್ ಪ್ರೊಟೆಸ್ಟ್ ನಡೆಸಲಾಯಿತು.ಜಿಲ್ಲಾಡಳಿತದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದ ಆಕ್ರೋಶಿತ ಮಾಲೀಕರು, ಆನ್‌ಲೈನ್ ಮಾರಾಟಕ್ಕೆ ಅವಕಾಶ ನೀಡಬಾರದು, ಒಂದು ವೇಳೆ ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ‘ಉಗ್ರ ಹೋರಾಟ’ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಔಷಧ ವ್ಯಾಪಾರಿಗಳ ಮುಖ್ಯ ಬೇಡಿಕೆ!
ಲೈಸೆನ್ಸ್ ಇಲ್ಲದೆ, ವೈದ್ಯರ ಚೀಟಿ ಇಲ್ಲದೆ ಆನ್‌ಲೈನ್ App ಗಳ ಮೂಲಕ ಕಾನೂನು ಬಾಹಿರವಾಗಿ ಔಷಧಿಗಳನ್ನು ಮನಬಂದಂತೆ ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ನಕಲಿ ಔಷಧಿಗಳ ಹಾವಳಿ ಹೆಚ್ಚಾಗಿದ್ದು, ಸಾಂಪ್ರದಾಯಿಕವಅಗಿ ಮೆಡಿಕಲ್ ನ್ನೇ ಉದ್ಯೋಗವಾಗಿ ನಂಬಿಕೊಂಡಿರುವ ಲಕ್ಷಾಂತರ ಕುಟುಂಬಗಳು ಬೀದಿಗೆ ಬೀಳುತ್ತಿವೆ.ಹಾಗಾಗಿ ಇ-ಫಾರ್ಮಸಿಗಳಿಗೆ ಸಂಪೂರ್ಣ ನಿಷೇಧ ಹೇರಬೇಕು ಎನ್ನುವುದು ಇವರ ಪ್ರಮುಖ ಆಗ್ರಹವಾಗಿದೆ.

#MedicalShopBandh #PharmacyStrike #AIOCD #KarnatakaNews #Bengaluru #OnlinePharmacyProtest #Medicines #EPharmacyBan #Vidyayanagara #Kalaburagi #Bidar #FreedomTV #BreakingNews

Comments (0)

Your email address will not be published. Required fields are marked *

Back to top button