ಕುಡಿಯಲು ನೀರೇ ಇಲ್ಲ-ಖಾಲಿ ಕೊಡಗಳೊಂದಿಗೆ ಮಹಿಳೆಯರ ಆಕ್ರೋಶ!
Drinking wate problem in Chintamani ward 18

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ನಗರದ 18ನೇ ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಜನರ ನಿದ್ದೆಗೆಡಿಸಿದ್ದು ಗೃಹಿಣಿಯರ ಆಕ್ರೋಶ ತಾರಕಕ್ಕೇರಿದೆ. ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರು ಪೂರೈಕೆಯಾಗದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸ್ಥಳೀಯ ನಿವಾಸಿಗಳು ಖಾಲಿ ಕೊಡಗಳನ್ನು ಹಿಡಿದು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಅನೇಕ ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಕ್ಯಾರೇ ಎನ್ನದ ಕಾರಣ, ಇಂದು ವಾರ್ಡ್‌ನಲ್ಲಿರುವ ಸರ್ಕಾರಿ ಬೋರ್‌ವೆಲ್‌ಗೆ ಮುತ್ತಿಗೆ ಹಾಕಿ ನಗರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಲ್ಲಿಗಳಲ್ಲಿ ನೀರಿಲ್ಲ, ದೈನಂದಿನ ಕೆಲಸಗಳಿಗೂ ಪರದಾಟ!
“ವಾರ್ಡ್ ನಂ18ರ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಿಂದ ಕುಡಿಯುವ ನೀರಿನ ಸರಬರಾಜು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ನಲ್ಲಿಗಳಲ್ಲಿ ನೀರು ಬರುತ್ತಿಲ್ಲ. ಇದರಿಂದಾಗಿ ಅಡುಗೆ, ಸ್ನಾನ ಹಾಗೂ ದೈನಂದಿನ ಕೆಲಸಗಳಿಗೆ ನೀರಿಲ್ಲದೆ ಮಹಿಳೆಯರು ಮತ್ತು ಮಕ್ಕಳು ಪರದಾಡುವಂತಾಗಿದೆ. ಈ ಬಗ್ಗೆ ಈಗಾಗಲೇ ಹತ್ತಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ನಗರಸಭೆಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ”ಎಂದು ಸ್ಥಳೀಯ ನಿವಾಸಿಗಳಾದ ವೆಂಕಟೇಶಪ್ಪಯ್ಯ,ಸುಧಾ,ಉಮಾ ಸೇರಿದಂತೆ ಹಲವರು ನಗರಸಭೆಯ ಬೇಜವಾಬ್ದಾರಿತನವನ್ನು ತರಾಟೆಗೆ ತೆಗೆದುಕೊಂಡರು.
ಮೋಟರ್ ರಿಪೇರಿ-ಅಧಿಕಾರಿಗಳ ಉಡಾಫೆ ಉತ್ತರ!
ಕುಡಿಯೋದಕ್ಕೆ ನೀರು ಕೊಡಿ ಎಂದು ಕೇಳಿದರೆ, ಅಧಿಕಾರಿಗಳು “ಮೋಟರ್ ರಿಪೇರಿಯಾಗಿದೆ” ಅಥವಾ “ಪೈಪ್‌ಲೈನ್ ಒಡೆದುಹೋಗಿದೆ” ಎಂಬ ಹಾರಿಕೆ ಉತ್ತರಗಳನ್ನು ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಪೈಪ್‌ಲೈನ್ ಒಡೆದು ಎರಡು ತಿಂಗಳಾದರೂ ಅದನ್ನು ಸರಿಪಡಿಸುವ ಮನಸ್ಸು ಅಧಿಕಾರಿಗಳು ಮಾಡುತ್ತಿಲ್ಲ. ನಮಗೆ ಕನಿಷ್ಠ ಪಕ್ಷ ವಾರಕ್ಕೆ ಎರಡು ಬಾರಿಯಾದರೂ ನೀರು ಬಿಡದೆ ಇದ್ದರೆ ಹೇಗೆ ಎಂದು ಸ್ಥಳೀಯರು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ದುಡ್ಡು ಕೊಟ್ಟು ನೀರು ಖರೀದಿ!
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹಿಳೆಯೊಬ್ಬರು ಮಾತನಾಡಿ,”ನಮಗೆ ಒಂದು ತಿಂಗಳಿಂದ ನೀರಿಲ್ಲ. ಮಕ್ಕಳನ್ನು ಶಾಲೆಗೆ ಕಳುಹಿಸಲು,ಸ್ನಾನ ಮಾಡಿಸಲು ನೀರಿಲ್ಲದೆ ತೀವ್ರ ಕಷ್ಟವಾಗುತ್ತಿದೆ.ನೀರಿನ ಟ್ಯಾಂಕರ್ ಗಳಿಗೆ ಕಾಸು ಕೊಟ್ಟು ಕೊಂಡುಕೊಳ್ಳುವ ಪರಿಸ್ಥಿತಿ ಬಂದಿದೆ. ನಗರಸಭೆಯವರು ಕೂಡಲೇ ಎಚ್ಚೆತ್ತುಕೊಂಡು ಈ ಸಮಸ್ಯೆಯನ್ನು ಬಗೆಹರಿಸಬೇಕು” ಎಂದು ಕಣ್ಣೀರು ಹಾಕಿದರು.
ಎರಡೇ ದಿನ ಗಡುವು-ನಗರಸಭೆಗೆ ಮುತ್ತಿಗೆ ಹಾಕುವ ಎಚ್ಚರಿಕೆ!
ಪ್ರತಿಭಟನಾ ಸ್ಥಳದಲ್ಲಿ ನಗರಸಭೆ ಮತ್ತು ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಘೋಷಣೆಗಳನ್ನು ಕೂಗಿದ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು ಒಂದು ವೇಳೆ ಮುಂದಿನ ಎರಡು ದಿನಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸಿ ಸುಗಮವಾಗಿ ನೀರು ಪೂರೈಕೆ ಮಾಡದಿದ್ದರೆ, ಇಡೀ ವಾರ್ಡ್‌ನ ಜನರೆಲ್ಲರೂ ಸೇರಿ ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ನಗರಸಭೆ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದ್ದಾರೆ.
#Chintamani #WaterScarcity #Chikkaballapura #PublicProtest #WaterCrisis #MunicipalCorporation #KarnatakaNews #BreakingNews #LocalIssue #FreedomTV #KannadaNews