
ಹಾವೇರಿ/ಹುಬ್ಬಳ್ಳಿ: ಹುಬ್ಬಳ್ಳಿ ಗ್ರಾಮೀಣ ಹಾಗೂ ಹಾವೇರಿ ಜಿಲ್ಲೆಯ ಹಾನಗಲ್ ಪೊಲೀಸರು ಜಂಟಿಯಾಗಿ ಭರ್ಜರಿ ಕಾರ್ಯಾಚರಣೆ ನಡೆಸಿ ಜನರ ಮೆಚ್ಚುಗೆ ಪಡೆದಿದ್ದಾರೆ. ಅಂತರಾಜ್ಯ ಮಟ್ಟದಲ್ಲಿ ಸರಣಿ ಕಳ್ಳತನ ಮಾಡಿ ಇಲಾಖೆಗೆ ತಲೆನೋವಾಗಿ ಪರಿಣಮಿಸಿದ್ದ ಇಬ್ಬರು ಖತರ್ನಾಕ್ ಖದೀಮರ ಹೆಡೆಮುರಿ ಕಟ್ಟಿದ್ದಾರೆ ಬಂಧಿತರಿಂದ ಬರೋಬ್ಬರಿ 1 ಕೋಟಿ 15 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳು, ಬೆಳ್ಳಿ ಸಾಮಗ್ರಿಗಳು ಹಾಗೂ ಕಳ್ಳತನಕ್ಕೆ ಬಳಸಿದ್ದ ಬೊಲೆರೊ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳು ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಬಾಳೇಹೊಸೂರು ಮೂಲದ ಶಿವರಾಜ ಹನುಮಂತಪ್ಪ ಮೋಡಕೇರ ಹಾಗೂ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಅಂಬಾಮಠ ಮೂಲದ ಅಶೋಕ ಅಲಿಯಾಸ್ ರಮೇಶ ಶಿವಪ್ಪ ಕೊಂಚಿಕೊರವರ ಎನ್ನಲಾಗಿದೆ.

ಸಿನಿಮೀಯ ಶೈಲಿಯಲ್ಲಿ ಆಭರಣ ಅಂಗಡಿ ಲೂಟಿ ಮಾಡಿದ್ದ ಗ್ಯಾಂಗ್!
ಕೆಲವೇ ದಿನಗಳ ಹಿಂದೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಚಿಕ್ಕಾಂಶಿ ಹೊಸೂರು ಗ್ರಾಮದ ‘ಶಾರದಾ ಜ್ಯುವೆಲರ್ಸ್’ ಎಂಬ ಚಿನ್ನದಂಗಡಿಯ ಶಟರ್ ಕತ್ತರಿಸಿ ಒಳನುಗ್ಗಿದ್ದ ಕಳ್ಳರು, ಕೇವಲ 45 ನಿಮಿಷಗಳಲ್ಲಿ ಅಂಗಡಿಯಲ್ಲಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನ,ಬೆಳ್ಳಿ ಹಾಗೂ ಭಾರಿ ತೂಕದ ಕಬ್ಬಿಣದ ಸೇಫ್ ಲಾಕರ್ (ತಿಜೋರಿ) ಸಮೇತ ಎಸ್ಕೇಪ್ ಆಗಿದ್ದರು. ಈ ಭೀಕರ ಕಳ್ಳತನ ಇಡೀ ಜಿಲ್ಲೆಯಾದ್ಯಂತ ತೀವ್ರ ಆತಂಕ ಸೃಷ್ಟಿಸಿತ್ತು. ಇದಲ್ಲದೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಕಿರೇಸೂರ ಗ್ರಾಮದಲ್ಲೂ ಈ ಗ್ಯಾಂಗ್ ಮನೆಯೊಂದರಿಂದ ಕಳ್ಳತನ ಮಾಡಿತ್ತು.
ತನಿಖೆಯಿಂದ ಬಯಲಾಯ್ತು ಅಂತರಾಜ್ಯ ಜಾಲ!
ಧಾರವಾಡ ಮತ್ತು ಹಾವೇರಿ ಜಿಲ್ಲಾ ಪೊಲೀಸ್ ಅಧೀಕ್ಷಕರ (SP) ಜಂಟಿ ಮಾರ್ಗದರ್ಶನದಲ್ಲಿ ಹುಬ್ಬಳ್ಳಿ ಗ್ರಾಮೀಣ, ನವಲಗುಂದ ಹಾಗೂ ಹಾನಗಲ್ ಪೊಲೀಸ್ ಠಾಣೆಯ ಜಂಟಿ ಸಿಬ್ಬಂದಿಗಳ ವಿಶೇಷ ತಂಡ ರಚಿಸಲಾಗಿತ್ತು. ಸಿಸಿಟಿವಿ ದೃಶ್ಯಾವಳಿ ಹಾಗೂ ತಾಂತ್ರಿಕ ಸುಳಿವುಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದಾಗ ಕಳ್ಳರ ಅಂತರಾಜ್ಯ ಜಾಲ ಬಯಲಾಗಿದೆ.ಆರೋಪಿಗಳು ಕಳ್ಳತನಕ್ಕಾಗಿ ಬಳಸಿದ್ದ ಬೊಲೆರೊ ವಾಹನವನ್ನು ಮೇ 14 ರಂದು ತೆಲಂಗಾಣ ರಾಜ್ಯದ ಗದ್ವಾಲ್ ಜಿಲ್ಲೆಯ ಬೀಚುಪಲ್ಲಿ ಗ್ರಾಮದಲ್ಲಿ ಕಳ್ಳತನ ಮಾಡಿಕೊಂಡು ಬಂದಿದ್ದರು. ಅದೇ ವಾಹನದಲ್ಲಿ ಸುತ್ತಾಡಿ ಹಾನಗಲ್‌ನ ಜ್ಯುವೆಲರಿ ಶಾಪ್ ಲೂಟಿ ಮಾಡಿದ್ದರು ಎಂಬುದು ತನಿಖೆಯಲ್ಲಿ ಬಹಿರಂಗಗೊಂಡಿದೆ.
ಇಬ್ಬರು ಅರೆಸ್ಟ್, ನಾಲ್ವರು ಎಸ್ಕೇಪ್!
ಖಾಕಿ ಪಡೆ ನಡೆಸಿದ ಜಂಟಿ ದಾಳಿಯಲ್ಲಿ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದ್ದು, ಬಂಧಿತರಿಂದ 310 ಗ್ರಾಂ ಚಿನ್ನಾಭರಣ, 26 ಕೆ.ಜಿ. ಬೆಳ್ಳಿಯ ಆಭರಣ ಹಾಗೂ ಕದ್ದ ಬೊಲೆರೊ ವಾಹನ ಸೇರಿದಂತೆ ಒಟ್ಟು ₹1.15 ಕೋಟಿ ಮೌಲ್ಯದ ಮಾಲು ಜಪ್ತಿ ಮಾಡಲಾಗಿದೆ.ಈ ದರೋಡೆ ಕೃತ್ಯದಲ್ಲಿ ಒಟ್ಟು 6 ಜನ ಆರೋಪಿಗಳು ಭಾಗಿಯಾಗಿದ್ದು, ಸದ್ಯ ಇಬ್ಬರು ಕಾರಾಗೃಹದಲ್ಲಿದ್ದಾರೆ. ತಲೆಮರೆಸಿಕೊಂಡಿರುವ ಉಳಿದ ನಾಲ್ವರು ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದು, ಶೀಘ್ರದಲ್ಲೇ ಉಳಿದವರನ್ನು ಬಂಧಿಸುವುದಾಗಿ ಪೊಲೀಸ್ ಇಲಾಖೆ ತಿಳಿಸಿದೆ. ಭರ್ಜರಿ ಕಾರ್ಯಾಚರಣೆ ನಡೆಸಿ ಇಡೀ ಕಳ್ಳತನ ಪ್ರಕರಣವನ್ನು ಬೇಧಿಸಿದ ಜಂಟಿ ಪೊಲೀಸ್ ತಂಡದ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.
#JointOperation #HubballiPolice #HaveriPolice #GoldTheftCase #HanagalRobbery #CrimeNews #KarnatakaPolice #InterstateThieves #BreakingNews #FreedomTV #KannadaNews