ಮಲೆನಾಡಲ್ಲಿ ಮತ್ತೊಂದು ಅಣು ಸ್ಥಾವರ- ರೊಚ್ಚಿಗೆದ್ದ ರೈತರು!
Farmers protest on Nuclar plant in shivamogga

ಶಿವಮೊಗ್ಗ: ಈಗಾಗಲೇ ಕೈಗಾ ಅಣು ವಿದ್ಯುತ್ ಸ್ಥಾವರದಿಂದ ಪರಿಸರ ಮತ್ತು ಆರೋಗ್ಯದ ಮೇಲೆ ಉಂಟಾಗಿರುವ ದುಷ್ಟಪರಿಣಾಮಗಳು ಜಗಜ್ಜಾಹೀರಾಗಿದೆ.ಈಗ ರಾಜ್ಯದ ಮಲೆನಾಡು ಭಾಗದಲ್ಲಿ ಮತ್ತೊಂದು ಅಣು ಸ್ಥಾವರ ಸ್ಥಾಪನೆಯ ಪ್ರಸ್ತಾವನೆ ಜನರಲ್ಲಿ ನಡುಕ ಹುಟ್ಟಿಸಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬೇಸೂರು ಗ್ರಾಮದಲ್ಲಿ ಕೇಂದ್ರ ಸರ್ಕಾರ ಅಣು ವಿದ್ಯುತ್ ಸ್ಥಾವರ ಸ್ಥಾಪಿಸಲು ಮುಂದಾಗಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಅಣು ಸ್ಥಾವರದ ಸಮೀಕ್ಷೆ
ಕೇಂದ್ರ ಸರ್ಕಾರದ ಅಧೀನದ ಎನ್.ಟಿ.ಪಿ.ಸಿ (NTPC) ಸಂಸ್ಥೆಯು ರಾಜ್ಯದಲ್ಲಿ ಹೊಸದಾಗಿ ಅಣು ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ಸ್ಥಳ ಗುರುತಿಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ, ಉತ್ತರ ಕನ್ನಡ, ವಿಜಯಪುರ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಪ್ರಾಥಮಿಕ ಭೂ-ವೈಜ್ಞಾನಿಕ ಪರಿಶೀಲನೆಗೆ ನಿರ್ದೇಶನ ನೀಡಲಾಗಿದೆ 2,000 ದಿಂದ 6,000 ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ಸುಮಾರು 1,200 ರಿಂದ 2,000 ಎಕರೆ ಭೂಮಿಯ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.
ಬೇಸೂರಿನಲ್ಲಿ ಮಡುಗಟ್ಟಿದ ಆತಂಕ!
ಸಾಗರ ತಾಲೂಕಿನ ಬೇಸೂರು ಗ್ರಾಮದ ಸರ್ವೆ ಸಂಖ್ಯೆ 104, 94, 80, 82ರ ವ್ಯಾಪ್ತಿಯಲ್ಲಿನ ಗೋಮಾಳ ಹಾಗೂ ಅರಣ್ಯ ಭೂಮಿಯನ್ನು ಈ ಯೋಜನೆಗೆ ಬಳಸಿಕೊಳ್ಳುವ ಸಾಧ್ಯತೆ ಇದೆ.”ಎರಡು ಬಾರಿ ಮುಳುಗಡೆ ಸಂತ್ರಸ್ತರು ನಾವು, ಈಗ ಮತ್ತೆ ಸಂಕಷ್ಟವೇ?” ಬೇಸೂರು ಗ್ರಾಮಸ್ಥರ ನೋವು ಕರುಳು ಹಿಂಡುವಂತಿದೆ. ಈ ಭಾಗದ ಜನರು ಈ ಹಿಂದೆ ಶರಾವತಿ ನದಿ ದಂಡೆಯ ಮಡೆನೂರು ಮತ್ತು ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣಕ್ಕಾಗಿ ಎರೆಡೆರಡು ಬಾರಿ ತಮ್ಮ ಭೂಮಿ ಮತ್ತು ಬದುಕನ್ನು ತ್ಯಾಗ ಮಾಡಿದವರು.”ನಾವು ಹರಿದು ಹಂಚಿ ಹೋಗಿದ್ದ ಬದುಕನ್ನು ಈಗಷ್ಟೇ ಸುಧಾರಿಸಿಕೊಳ್ಳುತ್ತಿದ್ದೇವೆ. ಈಗ ಮತ್ತೆ ಅಣು ಸ್ಥಾವರದಂತಹ ‘ಜೀವಂತ ಬಾಂಬ್’ ಹಾಕಿ ನಮ್ಮನ್ನು ಬೀದಿಗೆ ತಳ್ಳಬೇಡಿ,” ಎಂದು ಗ್ರಾಮಸ್ಥರು ಕಣ್ಣೀರಿಡುತ್ತಿದ್ದಾರೆ.
| ವಿವರ | ಅಂದಾಜು ಪ್ರಮಾಣ / ಭೂಮಿ |
| ವಿದ್ಯುತ್ ಉತ್ಪಾದನೆ | 2,000 – 6,000 MW |
| ಅಗತ್ಯವಿರುವ ಒಟ್ಟು ಜಾಗ | 1,200 – 2,000 ಎಕರೆ |
| ಬೇಸೂರಿನ ಗೋಮಾಳ/ಅರಣ್ಯ | 1,300+ ಎಕರೆ |
| ಕಾಲೊನಿ ನಿರ್ಮಾಣಕ್ಕೆ | 100 – 150 ಎಕರೆ |
ಆರೋಗ್ಯ ಮತ್ತು ಪರಿಸರದ ಮೇಲೆ ಕರಾಳ ನೆರಳು
ಅಣು ಸ್ಥಾವರಗಳಿಂದ ಹೊರಸೂಸುವ ವಿಕಿರಣಗಳು 40 ರಿಂದ 50 ಕಿ.ಮೀ. ವ್ಯಾಪ್ತಿಯಲ್ಲಿ ಮಾರಕ ಪರಿಣಾಮ ಬೀರುತ್ತವೆ ಎಂದು ಪರಿಸರ ತಜ್ಞರು ಎಚ್ಚರಿಸಿದ್ದಾರೆ. ಈ ಸ್ಥಾವರದಿಂದ ಕ್ಯಾನ್ಸರ್, ಡಯಾಬಿಟಿಸ್ ಮತ್ತು ಚರ್ಮರೋಗದಂತಹ ಗಂಭೀರ ಕಾಯಿಲೆಗಳು ಬರುವ ಬಗ್ಗೆ ಜನತೆ ಆತಂಕಗೊಂಡಿದ್ದಾರೆ. ಇದರೊಂದಿಗೆ ಪರಿಸರ ನಾಶವಾಗಲಿದ್ದು, ಪಶ್ಚಿಮಘಟ್ಟದ ಸೂಕ್ಷ್ಮ ಪರಿಸರ, ದಟ್ಟ ಅರಣ್ಯ ಮತ್ತು ಜೀವವೈವಿಧ್ಯಕ್ಕೆ ಕೊಡಲಿ ಪೆಟ್ಟು ಬೀಳಲಿದೆ. ಪವಿತ್ರ ಕ್ಷೇತ್ರ ಸಿಗಂದೂರಿಗೆ ಅಪಾಯ- ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇಗುಲವೂ ಈ ಯೋಜನೆಯ ವ್ಯಾಪ್ತಿಗೆ ಹತ್ತಿರದಲ್ಲಿದ್ದು, ಪ್ರವಾಸಿಗರು ಮತ್ತು ಭಕ್ತರ ಸುರಕ್ಷತೆಗೆ ಧಕ್ಕೆಯಾಗುವ ಭೀತಿ ಇದೆ.
ರೊಚ್ಚಿಗೆದ್ದ ರೈತರು- “ಪ್ರಾಣ ಕೊಟ್ಟೇವು, ಭೂಮಿ ಕೊಡಲ್ಲ!”
“ದಿನಕ್ಕೊಂದು ಜೀವವಿರೋಧಿ ಯೋಜನೆ ತಂದು ನಮ್ಮನ್ನು ಸಾಯಿಸುವ ಬದಲು ಸರ್ಕಾರ ನಮಗೆ ಒಂದು ತೊಟ್ಟು ವಿಷ ಕೊಡಲಿ” ಎಂದು ಬೇಸೂರು ರೈತರು ಆಕ್ರೋಶ ಹೊರಹಾಕಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ರೈತ ಸಂಘಟನೆಗಳು ಹಾಗೂ ಸ್ಥಳೀಯರು ಪಕ್ಷಾತೀತವಾಗಿ ಹೋರಾಟಕ್ಕೆ ಸಿದ್ಧರಾಗಿದ್ದಾರೆ. ಇತ್ತ ಶಾಸಕರು ಮತ್ತು ಸಂಸದರು ತಮಗೆ ಮಾಹಿತಿ ಇಲ್ಲ ಎಂದು ಹೇಳುತ್ತಿರುವುದು ಜನರ ಅನುಮಾನಕ್ಕೆ ಕಾರಣವಾಗಿದೆ.”ನಮ್ಮ ಭೂಮಿಯಲ್ಲಿ ಒಂದು ಮೆಟ್ಟು ಕೂಡ ಇಡಲು ಬಿಡುವುದಿಲ್ಲ.ಈ ಬಾರಿ ಪ್ರಾಣ ಹೋದರೂ ಅಣು ಸ್ಥಾವರಕ್ಕೆ ಜಾಗ ನೀಡುವುದಿಲ್ಲ.
ಈ ಹೋರಾಟ ಈಗ ಕೇವಲ ಒಂದು ಗ್ರಾಮಕ್ಕೆ ಸೀಮಿತವಾಗಿಲ್ಲ, ಇಡೀ ಮಲೆನಾಡಿನ ಅಸ್ತಿತ್ವದ ಉಗ್ರ ಹೋರಾಟ ಮಾಡುವುದಾಗಿ ಹೋರಾಟಗಾರ ತೀ.ನಾ ಶ್ರೀನಿವಾಸ್ ಹೇಳಿದರು. ಸರ್ಕಾರ ಈ ಪ್ರಸ್ತಾವನೆಯನ್ನು ಕೈಬಿಡುತ್ತದೆಯೇ ಅಥವಾ ಜನರ ಹೋರಾಟ ತೀವ್ರ ಸ್ವರೂಪ ಪಡೆಯಲಿದೆಯೇ ಎಂದು ಕಾದು ನೋಡಬೇಕಿದೆ.
#FreedomTV #Shimoga #Sagara #Besur #NuclearPowerPlant #SaveMalnad #FarmersProtest #EnvironmentalCrisis #Sigandur #KarnatakaNews #NuclearPlantOpposition #WesternGhats #NTPC
