Ballary

ಭೂಮಿ ವಾಪಸ್‌ಗೆ ಆಗ್ರಹ- ರೈತರ ಬೃಹತ್ ಪ್ರತಿಭಟನೆ!

Farmers protest in Ballari against Industries

ಬಳ್ಳಾರಿ: ಜಿಲ್ಲೆಯ ಕುಡತಿನಿ ಭಾಗದಲ್ಲಿ ಭೂಮಿ ಹಕ್ಕಿಗಾಗಿ ನಡೆಯುತ್ತಿರುವ ರೈತರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೈಗಾರಿಕೆಗಳಿಗಾಗಿ ವಶಪಡಿಸಿಕೊಂಡ ತಮ್ಮ ಜಮೀನನ್ನು ವಾಪಸ್ ನೀಡುವಂತೆ ಆಗ್ರಹಿಸಿ ನೂರಾರು ರೈತರು ಎತ್ತಿನ ಬಂಡಿಗಳೊಂದಿಗೆ ಜಮೀನಿಗೆ ನುಗ್ಗಲು ಯತ್ನಿಸಿದಾಗ, ಪೊಲೀಸರು ಮತ್ತು ರೈತರ ನಡುವೆ ಭಾರಿ ನೂಕಾಟ-ತಳ್ಳಾಟ ನಡೆದ ಘಟನೆ ಸಂಭವಿಸಿದೆ.

ಉದ್ಯೋಗವೂ ಇಲ್ಲ-ಭೂಮಿಗೆ ಸೂಕ್ತ ಬೆಲೆಯೂ ಇಲ್ಲ!

ಹಲವು ವರ್ಷಗಳ ಹಿಂದೆ ಈ ಭಾಗದ ರೈತರ ಜಮೀನನ್ನು ಮಿತ್ತಲ್ ಕಾರ್ಖಾನೆ ಸ್ಥಾಪನೆಗಾಗಿ ವಶಪಡಿಸಿಕೊಳ್ಳಲಾಗಿತ್ತು. ಆದರೆ, ತದನಂತರ ಆ ಭೂಮಿಯನ್ನು KIADB (ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ) ಮೂಲಕ ಜಿಂದಾಲ್ ಸಂಸ್ಥೆಗೆ ಹಸ್ತಾಂತರಿಸಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಭೂಮಿ ಕಳೆದುಕೊಂಡ ರೈತ ಕುಟುಂಬಗಳಿಗೆ ಹಿಂದೆ ನೌಕರಿ ನೀಡುವುದಾಗಿ ಭರವಸೆ ನೀಡಲಾಗಿತ್ತು ಆದರೆ ಮಾತಿಗೆ ತಪ್ಪಿದ ಕೈಗಾರಿಕೆಗಳು ಸ್ಥಳೀಯರಿಗೆ ಉದ್ಯೋಗಗಳನ್ನೇ ನೀಡಿಲ್ಲ. ಬಂಗಾರದ ಬೆಲೆಯುಳ್ಳ ಜಮೀನಿಗೆ ನ್ಯಾಯಯುತವಾದ ಮಾರುಕಟ್ಟೆ ಬೆಲೆಯನ್ನೂ ಪಾವತಿಸಿಲ್ಲ ಎಂಬುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಜಮೀನಿಗೆ ನುಗ್ಗಲು ರೈತರ ಯತ್ನ- ಪೊಲೀಸರ ಅಡ್ಡಿ!
ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರವಾಗಲಿ ಅಥವಾ ಕಂಪನಿಯಾಗಲಿ ಸ್ಪಂದಿಸದ ಹಿನ್ನೆಲೆಯಲ್ಲಿ,ಇಂದು ರೈತರ ಆಕ್ರೋಶದ ಕಟ್ಟೆ ಒಡೆದಿದೆ. ರೈತರು ಹತ್ತಾರು ಎತ್ತಿನ ಬಂಡಿಗಳೊಂದಿಗೆ ತಮ್ಮ ಹಳೆಯ ಜಮೀನುಗಳಿಗೆ ನುಗ್ಗಿ ಉಳುಮೆ ಮಾಡಲು ಮುಂದಾದರು.

ಜಮೀನಿಗೆ ನುಗ್ಗದಂತೆ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದಾಗ ರೈತರು ಹಾಗೂ ಪೊಲೀಸರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆಯಿತು. ಎತ್ತಿನ ಬಂಡಿಗಳನ್ನು ಜಮೀನಿನೊಳಗೆ ನುಗ್ಗಿಸಲು ರೈತರು ಪ್ರಯತ್ನಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಪೊಲೀಸರು ಮತ್ತು ರೈತರ ನಡುವೆ ದೂಡಾಟ ತಳ್ಳಾಟ ಜೋರಾಗಿಯೇ ನಡೆದಿದೆ.ಪರಿಸ್ಥಿತಿ ಹತೋಟಿ ತಪ್ಪುತ್ತಿದ್ದಂತೆ, ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪ್ರಮುಖ ರೈತ ಮುಖಂಡರನ್ನು ಮತ್ತು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.

ಜಿಂದಾಲ್ ಸರ್ವೆಗೆ ರೈತರ ವಿರೋಧ!
ಪ್ರಸ್ತುತ ಜಿಂದಾಲ್ ಸಂಸ್ಥೆಯು ಈ ಭೂಮಿಯಲ್ಲಿ ಸರ್ವೆ ಕಾರ್ಯವನ್ನು ಆರಂಭಿಸಿದೆ. “ನಮಗೆ ಉದ್ಯೋಗವೂ ಇಲ್ಲ, ಸರಿಯಾದ ಹಣವೂ ಸಂದಾಯವಾಗಿಲ್ಲ. ಹಾಗಾಗಿ ತಲತಲಾಂತರದಿಂದ ಬಂದ ನಮ್ಮ ಭೂಮಿ ನಮಗೇ ಇರಲಿ, ನಾವು ಕೃಷಿ ಮಾಡಿಕೊಳ್ಳುತ್ತೇವೆ” ಎಂಬುದಾಗಿ ರೈತರ ಪಟ್ಟು ಹಿಡಿದರು.ಈ ಕುರಿತು ನ್ಯಾಯ ಸಿಗುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ರೈತ ಸಂಘಟನೆಗಳು ಎಚ್ಚರಿಕೆ ನೀಡಿವೆ.

#FreedomTV #BallariNews #FarmerProtest #Kudatini #JindalSteel #KIADB #LandAcquisition #FarmersFight #KarnatakaNews #ಬಳ್ಳಾರಿ #ರೈತಪ್ರತಿಭಟನೆ #ಕುಡತಿನಿ #ಜಿಂದಾಲ್ #ಭೂಹೋರಾಟ

Comments (0)

Your email address will not be published. Required fields are marked *

Back to top button