ಮೃತ್ಯುಕೂಪದ ರಸ್ತೆ-ರೊಚ್ಚಿಗೆದ್ದ ಹುಲಗಬಾಳಿ ಜನತೆ!
Athani people urges MLA lakhman savadi for Road project

ಅಥಣಿ: ತಾಲ್ಲೂಕಿನ ಹುಲಗಬಾಳ ಗ್ರಾಮದಿಂದ ಐನಾಪುರ ರಸ್ತೆ ಮತ್ತು ಸಂಗಮೇಶ್ವರ ದೇವಸ್ಥಾನಕ್ಕೆ ಹೋಗುವ ದಾರಿ ಸಂಪೂರ್ಣ ತಗ್ಗು-ಗುಂಡಿಗಳಿಂದ ಕೂಡಿದ್ದು, ಮೃತ್ಯುಕೂಪ ರಸ್ತೆಯಾಗಿ ಮಾರ್ಪಟ್ಟಿದೆ. ಶಾಸಕ ಲಕ್ಷ್ಮಣ ಸವದಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಗ್ರಾಮ ಭಾರತದಲ್ಲಿದೆಯೋ ಅಥವಾ ಪಾಕಿಸ್ತಾನದಲ್ಲಿದೆಯೋ ಗೊತ್ತಿಲ್ಲ. ಶಾಸಕರು ನಮಗೆ ರಸ್ತೆ ಮಾಡಿಕೊಡುತ್ತಿಲ್ಲ” ಎಂದು ಸ್ಥಳೀಯರು ಆಕ್ರೋಶದ ನುಡಿಗಳನ್ನಾಡಿದ್ದಾರೆ ‘ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ’ (PMGSY) ಮೂಲಕ ಪ್ರತಿ ಹಳ್ಳಿಗೂ ಉತ್ತಮ ರಸ್ತೆ ಸಂಪರ್ಕ ಕಲ್ಪಿಸುವ ಯೋಜನೆಯಡಿ ಹುಲಗಬಾಳಿ ಗ್ರಾಮದ ರಸ್ತೆ ಅಭಿವೃದ್ಧಿಯಾಗದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ದೇವಸ್ಥಾನದಲ್ಲಿ ಆಣೆ-ಪ್ರಮಾಣ- ಕಾಣೆಯಾದ ಲಕ್ಷ್ಮಣ ಸವದಿ
ಚುನಾವಣೆಯ ಪೂರ್ವದಲ್ಲಿ ಮತ ಪ್ರಚಾರಕ್ಕೆ ಬಂದಿದ್ದ ಶಾಸಕ ಲಕ್ಷ್ಮಣ ಸವದಿ ಅವರು ಇದೇ ಸಂಗಮೇಶ್ವರ ದೇವಸ್ಥಾನದಲ್ಲಿ ಕುಳಿತು, “ನಿಮ್ಮ ಸಮಸ್ಯೆ ನನಗೆ ಗೊತ್ತಿದೆ, ಈ ಬಾರಿ ನನ್ನನ್ನು ಗೆಲ್ಲಿಸಿ ರಸ್ತೆ ನಿರ್ಮಾಣ ಖಂಡಿತ ” ಎಂದು ಹಳ್ಳಿ ಜನರ ಮುಂದೆ ಅಂಗಲಾಚಿದ್ದರು. ಆದರೆ, ಚುನಾವಣೆಯಲ್ಲಿ ಗೆದ್ದ ಬಳಿಕ ಶಾಸಕರು ಈ ಮುಖ ಇಟ್ಟು ಮಲಗಿಲ್ಲ ಎಂದು ಗ್ರಾಮಸ್ಥರು ಕಣ್ಣೀರಿಟ್ಟಿದ್ದಾರೆ. ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಹಾಗೂ ಶಾಸಕರಿಗೆ ನೂರಾರು ಬಾರಿ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ರಸ್ತೆ ಇಲ್ಲದೆ ಯುವಕರಿಗೆ ಸಿಗುತ್ತಿಲ್ಲ ಹೆಣ್ಣು! ಅಂಬುಲೆನ್ಸ್ಗೂ ಇಲ್ಲ ದಾರಿ!
ಹುಲಗಬಾಳಿ ಗ್ರಾಮದ 2,000ಕ್ಕೂ ಹೆಚ್ಚು ಜನಸಂಖ್ಯೆಯುಳ್ಳ ಶೇ 60ರಷ್ಟು ಜನರು ಪ್ರತಿನಿತ್ಯ ಇದೇ ನರಕ ಸದೃಶ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಸಂಚರಿಸುತ್ತಿದ್ದಾರೆ. ಇಲ್ಲಿನ ಜನರ ಅಳಲು ಕೇಳಿದರೆ ಎಂಥವರ ಕಣ್ಣಲ್ಲೂ ನೀರು ಬರುತ್ತದೆ.ಊರಿನ ವ್ಯವಸ್ಥೆ ನೋಡಿ ವರರಿಗೆ ಯಾರೂ ಹೆಣ್ಣು ಕೊಡುತ್ತಿಲ್ಲ. ರಸ್ತೆ ಅಧ್ವಾನವಾಗಿರುವ ಕಾರಣ ಮತ್ತು ಯಾವುದೇ ವಾಹನ ಸೌಲಭ್ಯ ಇಲ್ಲದ ಕಾರಣ ಜನರ ಬದುಕು ನರಕ ಸದೃಶ್ಯವಾಗಿದೆ.
ಮಕ್ಕಳ ಶಿಕ್ಷಣಕ್ಕೆ ಕುತ್ತು-ಗರ್ಭಿಣಿಯರ ಪರದಾಟ!
ರಸ್ತೆ ಮತ್ತು ಬಸ್ ಇಲ್ಲದ ಕಾರಣ ಮಕ್ಕಳಿಗೆ ಸರಿಯಾದ ಶಿಕ್ಷಣ ಕೊಡಿಸಲು ಸಾಧ್ಯವಾಗುತ್ತಿಲ್ಲ.ದೂರದ ಸಂಬಂಧಿಕರ ಮನೆಯಲ್ಲಿಟ್ಟು ಓದಿಸುವ ಪರಿಸ್ಥಿತಿ ಎದುರಾಗಿದೆ. ಹೆರಿಗೆ ಸಮಯಕ್ಕೆ ಅಂಬುಲೆನ್ಸ್ ಬರಲು ಇಲ್ಲಿ ದಾರಿಯೇ ಇಲ್ಲ ತುರ್ತು ಸಂದರ್ಭದಲ್ಲಿ ಗರ್ಭಿಣಿಯರನ್ನು 4 ಕಿಲೋಮೀಟರ್ ದೂರ ಹೊತ್ತುಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ.ಖಾಸಗಿ ವಾಹನಗಳೂ ಈ ರಸ್ತೆಗೆ ಕಾಲಿಡುತ್ತಿಲ್ಲ.
ಸ್ಥಳೀಯರ ಆಕ್ರೋಶ
“ಬೈಕ್ನಲ್ಲಿ ಹೋಗುವಾಗ ಬಿದ್ದು ನನ್ನ ಕಾಲು ಮುರಿಯಿತು. ನಾವು ಬಡವರು ಎಂಬ ಕಾರಣಕ್ಕೆ ನಮ್ಮನ್ನು ಯಾಕೆ ಹೀಗೆ ನಡೆಸಿಕೊಳ್ಳುತ್ತೀರಿ? ನಾವು ಭಾರತದ ಪ್ರಜೆಗಳಲ್ಲವೇ? ಶಾಸಕರ ಬಳಿ ಹೋದರೆ ಬರೀ ಭರವಸೆ ನೀಡಿ ಕಳುಹಿಸುತ್ತಾರೆ.ನಮಗೆ ಈಗ ನೇಣು ಹಾಕಿಕೊಳ್ಳುವುದು ಒಂದೇ ಬಾಕಿ ಉಳಿದಿದೆ.” ಎಂದು ಜನತೆ ಭಾವನಾತ್ಮಕವಾಗಿ ತಮ್ಮ ಅಳಲು ತೋಡಿಕೊಂಡಿರು.ಶಾಸಕ ಲಕ್ಷ್ಮಣ ಸವದಿ ಅವರೇ,ಇನ್ನಾದರೂ ಎಚ್ಚೆತ್ತುಕೊಳ್ಳಿ. ಕೂಡಲೇ ಹುಲಗಬಾಳಿ ಗ್ರಾಮದ ರಸ್ತೆ ಸಮಸ್ಯೆಯನ್ನು ಬಗೆಹರಿಸಿ, ಜನರಿಗೆ ನ್ಯಾಯ ನೀಡಿ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
#LaxmanSavadi #AthaniConstituency #BelagaviNews #HulgabaliRoadScandal #PMGSY #RuralKarnataka #NoRoadNoVote #PublicOutrage #FreedomTVNews #KarnatakaPolitics #BelagaviInfrastructure

