
ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕೋಳಿ ಮೊಟ್ಟೆ ದರದಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು, ಗ್ರಾಹಕರಿಗೆ ದರದ ಬಿಸಿ ಕಡಿಮೆಯಾಗಿದೆ. ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧದ ಪರಿಣಾಮವಾಗಿ ಗಲ್ಫ್ ರಾಷ್ಟ್ರಗಳಿಗೆ ನಿತ್ಯ ರಫ್ತಾಗುತ್ತಿದ್ದ ಸುಮಾರು 60 ಲಕ್ಷ ಮೊಟ್ಟೆಗಳ ಸಾಗಾಟ ಸ್ಥಗಿತಗೊಂಡಿರುವುದು ಈ ಬೆಲೆ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ರಫ್ತು ನಿಂತಿರುವುದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಮೊಟ್ಟೆಗಳ ದಾಸ್ತಾನು ಹೆಚ್ಚಾಗಿದ್ದು, ಬೇಡಿಕೆಗಿಂತ ಪೂರೈಕೆ ಅಧಿಕವಾಗಿದೆ. ನ್ಯಾಷನಲ್ ಎಗ್ ಕೋ-ಆರ್ಡಿನೇಷನ್ ಕಮಿಟಿಯ ಮಾಹಿತಿ ಪ್ರಕಾರ, ಸದ್ಯ ಬೆಂಗಳೂರಿನಲ್ಲಿ ಸಗಟು ದರ 4.55 ರೂಪಾಯಿ ಇದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಮೊಟ್ಟೆ 5 ರಿಂದ 5.50 ರೂಪಾಯಿ ದರದಲ್ಲಿ ಲಭ್ಯವಿದೆ.
ಬೆಲೆ ಇಳಿಕೆಗೆ ಕೇವಲ ರಫ್ತು ಸ್ಥಗಿತ ಮಾತ್ರವಲ್ಲದೆ ಸ್ಥಳೀಯ ಕಾರಣಗಳೂ ಪ್ರಭಾವ ಬೀರಿವೆ. ರಾಜ್ಯದಲ್ಲಿ ಶಾಲೆಗಳಿಗೆ ಬೇಸಿಗೆ ರಜೆ ಇರುವುದರಿಂದ ಮಧ್ಯಾಹ್ನದ ಬಿಸಿಯೂಟಕ್ಕೆ ಮೊಟ್ಟೆ ಪೂರೈಕೆ ನಿಂತಿದೆ. ಅಲ್ಲದೆ, ಪ್ರಸ್ತುತ ಎದುರಾಗಿರುವ ಅಡುಗೆ ಅನಿಲದ (LPG) ಕೊರತೆಯಿಂದಾಗಿ ಬೀದಿಬದಿಯ ಹೋಟೆಲ್‌ಗಳ ಸಂಖ್ಯೆ ಕ್ಷೀಣಿಸಿದ್ದು, ಮೊಟ್ಟೆಯ ಬಳಕೆ ಕಡಿಮೆಯಾಗಿದೆ. ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಮೊಟ್ಟೆ ಸೇವನೆ ಮತ್ತು ಬೇಡಿಕೆ ಕುಸಿಯುವುದು ಸಹಜವಾಗಿದ್ದರೂ, ಈ ಬಾರಿ ಅಂತರಾಷ್ಟ್ರೀಯ ರಾಜಕೀಯ ವಿದ್ಯಮಾನಗಳು ಮತ್ತು ಸ್ಥಳೀಯ ಅನಿಲ ಬಿಕ್ಕಟ್ಟು ಬೆಲೆ ಮತ್ತಷ್ಟು ಕುಸಿಯುವಂತೆ ಮಾಡಿವೆ.
ರಾಜ್ಯದಲ್ಲಿ ಪ್ರತಿದಿನ ಸುಮಾರು 2.20 ಕೋಟಿ ಮೊಟ್ಟೆಗಳು ಉತ್ಪಾದನೆಯಾಗುತ್ತಿದ್ದು, ಬಳಕೆಯ ಪ್ರಮಾಣ ಕುಸಿದಿರುವುದು ಕೋಳಿ ಸಾಕಾಣಿಕೆದಾರರಿಗೆ ಆರ್ಥಿಕ ಸಂಕಷ್ಟ ತಂದೊಡ್ಡಿದೆ. ಹಿಂದೆ ಚಿಲ್ಲರೆ ಮಾರುಕಟ್ಟೆಯಲ್ಲಿ 6 ರಿಂದ 7 ರೂಪಾಯಿವರೆಗೆ ಮಾರಾಟವಾಗುತ್ತಿದ್ದ ಮೊಟ್ಟೆಗಳು ಈಗ ಅಗ್ಗವಾಗಿ ದೊರೆಯುತ್ತಿವೆ. ಕೇವಲ ಬೆಂಗಳೂರು ಮಾತ್ರವಲ್ಲದೆ, ಹೈದರಾಬಾದ್ ಮತ್ತು ತಮಿಳುನಾಡಿನ ನಾಮಕ್ಕಲ್ ಮಾರುಕಟ್ಟೆಗಳಲ್ಲೂ ಇದೇ ಪರಿಸ್ಥಿತಿ ಮುಂದುವರಿದಿದ್ದು, ದೇಶಾದ್ಯಂತ ಮೊಟ್ಟೆ ಉದ್ಯಮವು ಬೇಡಿಕೆಯ ಕೊರತೆಯನ್ನು ಎದುರಿಸುತ್ತಿದೆ.




