KODAGUಜಿಲ್ಲೆಸಿನಿಮಾಸುದ್ದಿ

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣಗೆ ಪೋಷಕರಿಂದ ಭರ್ಜರಿ ಗಿಫ್ಟ್..!

ವಿರಾಜಪೇಟೆ: ಕೊಡಗು ಮೂಲದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಅವರ ತಂದೆ ಮದನ್ ಮಂದಣ್ಣ ಅವರು ತಮ್ಮ ಐಷಾರಾಮಿ ನಿವಾಸವನ್ನು ಮದುವೆಯ ಉಡುಗೊರೆಯಾಗಿ ನೀಡುವ ಮೂಲಕ ಮಗಳ ಮೇಲಿನ ಪ್ರೀತಿಯನ್ನು ಮೆರೆದಿದ್ದಾರೆ. ಇತ್ತೀಚಿಗಷ್ಟೇ ನಟ ವಿಜಯ ದೇವರಕೊಂಡ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ರಶ್ಮಿಕಾ ಅವರಿಗೆ, ತಂದೆ-ತಾಯಿ ತಮ್ಮ ಹೆಸರಿನಲ್ಲಿದ್ದ ಆಸ್ತಿಯನ್ನು ಅಧಿಕೃತವಾಗಿ ವರ್ಗಾಯಿಸಿಕೊಟ್ಟಿದ್ದಾರೆ. ವಿರಾಜಪೇಟೆ ತಾಲೂಕಿನ ಕುಕ್ರೂರು ಗ್ರಾಮದಲ್ಲಿರುವ ‘ಸೆರಿನಿಟಿ’ ಎಂಬ ಹೆಸರಿನ ಈ ಭವ್ಯ ಬಂಗಲೆಯು ವಿರಾಜಪೇಟೆ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರಾದ ಮದನ್ ಮಂದಣ್ಣ ಮತ್ತು ಸುಮನ್ ಮಂದಣ್ಣ ಅವರ ಮಾಲೀಕತ್ವದಲ್ಲಿತ್ತು. ಈಗ ಈ ಆಸ್ತಿಯನ್ನು ವಿರಾಜಪೇಟೆ ಉಪನೋಂದಣಿ ಕಚೇರಿಯಲ್ಲಿ ರಶ್ಮಿಕಾ ಅವರ ಹೆಸರಿಗೆ ಖಾತೆ ಬದಲಾವಣೆ ಮಾಡುವ ಮೂಲಕ ಕಾನೂನುಬದ್ಧವಾಗಿ ಉಡುಗೊರೆಯಾಗಿ ನೀಡಲಾಗಿದೆ.

ಸರ್ವೆ ಸಂಖ್ಯೆ 142/1 ಮತ್ತು 142/2 ರಲ್ಲಿ ವ್ಯಾಪಿಸಿರುವ ಈ ಐಷಾರಾಮಿ ಮನೆಯು ರಶ್ಮಿಕಾ ಅವರಿಗೆ ಭಾವನಾತ್ಮಕವಾಗಿಯೂ ಅತ್ಯಂತ ಹತ್ತಿರವಾದುದಾಗಿದೆ. ಕೊಡಗಿನ ಸಂಪ್ರದಾಯದಂತೆ ಮಗಳ ಮದುವೆಯ ಸಂದರ್ಭದಲ್ಲಿ ಪೋಷಕರು ನೀಡುವ ಈ ಅಮೂಲ್ಯ ಕಾಣಿಕೆಯು ಈಗ ಸಾರ್ವಜನಿಕ ವಲಯದಲ್ಲಿ ಮತ್ತು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಚಿತ್ರರಂಗದಲ್ಲಿ ‘ನ್ಯಾಷನಲ್ ಕ್ರಶ್’ ಎಂದೇ ಗುರುತಿಸಿಕೊಂಡಿರುವ ರಶ್ಮಿಕಾ ಮಂದಣ್ಣ, ತಮ್ಮ ಹುಟ್ಟೂರಿನ ಮೇಲಿರುವ ಪ್ರೀತಿಯಿಂದಾಗಿ ಆಗಾಗ್ಗೆ ಈ ಮನೆಗೆ ಭೇಟಿ ನೀಡುತ್ತಿರುತ್ತಾರೆ. ಈಗ ಈ ಮನೆಯ ಸಂಪೂರ್ಣ ಮಾಲೀಕತ್ವ ಅವರ ಪಾಲಾಗಿದ್ದು, ಕೊಡಗಿನ ಮಗಳ ವೈವಾಹಿಕ ಜೀವನಕ್ಕೆ ಪೋಷಕರು ಹಾರೈಸಿದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Comments (0)

Your email address will not be published. Required fields are marked *

Back to top button