
ವಿಜಯಪುರದಲ್ಲಿ ನಡೆದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾಜಿ ಸಚಿವ ಸಿ.ಟಿ. ರವಿ ಅವರು ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸರ್ಕಾರವು ಕೇವಲ ನಕಾರಾತ್ಮಕ ಕಾರಣಗಳಿಗಾಗಿ ಸುದ್ದಿಯಲ್ಲಿದೆ ಎಂದು ಟೀಕಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಒಂದೇ ಒಂದು ಒಳ್ಳೆಯ ಕೆಲಸದಿಂದಲೂ ಗುರುತಿಸಿಕೊಂಡಿಲ್ಲ; ಬದಲಾಗಿ ಮುಡಾ ಹಗರಣ, ವಾಲ್ಮೀಕಿ ನಿಗಮದ ಅವ್ಯವಹಾರ, ಡ್ರಗ್ಸ್ ಮಾಫಿಯಾ, ರೈತರು ಮತ್ತು ಸರ್ಕಾರಿ ನೌಕರರ ಆತ್ಮಹತ್ಯೆಯಂತಹ ಕೆಟ್ಟ ವಿಚಾರಗಳಿಂದಲೇ ಸುದ್ದಿಯಾಗುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ. ಉಪಚುನಾವಣೆಯ ಹಿನ್ನೆಲೆಯಲ್ಲಿ ಈಗ ಮೆಡಿಕಲ್ ಕಾಲೇಜಿಗೆ ಅಡಿಗಲ್ಲು ಹಾಕಲಾಗುತ್ತಿದೆ, ಆದರೆ ಚುನಾವಣೆ ಮುಗಿದ ಮೇಲೆ ಅದನ್ನು ಕಿತ್ತುಕೊಂಡು ಹೋಗುತ್ತಾರೆ.
ಬೆಲೆ ಏರಿಕೆಯ ವಿಚಾರವಾಗಿ ಸರ್ಕಾರದ ನಿಲುವನ್ನು ಪ್ರಶ್ನಿಸಿದ ಸಿ.ಟಿ. ರವಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಯುದ್ಧದಂತಹ ಅನಿವಾರ್ಯ ಕಾರಣಗಳಿಂದ ಕೆಲವು ವಸ್ತುಗಳ ಬೆಲೆ ಏರಿಕೆಯಾಗಿದ್ದರೆ, ರಾಜ್ಯ ಸರ್ಕಾರವು ಯಾವುದೇ ಕಾರಣವಿಲ್ಲದಿದ್ದರೂ ಅಬಕಾರಿ ಸುಂಕ ಮತ್ತು ಸ್ಟಾಂಪ್ ಪೇಪರ್ ನೋಂದಣಿ ಶುಲ್ಕವನ್ನು ಹೆಚ್ಚಿಸುವ ಮೂಲಕ ಜನಸಾಮಾನ್ಯರ ಮೇಲೆ ಹಗಲು ದರೋಡೆ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ನಮ್ಮನ್ನು ಜೇಬುಗಳ್ಳರು ಎಂದು ಕರೆಯುವ ಸರ್ಕಾರವು ವಾಸ್ತವದಲ್ಲಿ ಹಗಲುದರೋಡೆಕೋರರಂತೆ ವರ್ತಿಸುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ರಾಜ್ಯಾದ್ಯಂತ ಡ್ರಗ್ ಪೆಡ್ಲರ್‌ಗಳ ಜಾಲ ಹರಡಿಕೊಂಡಿರುವುದಕ್ಕೆ ಸರ್ಕಾರದ ಕೃಪಾಕಟಾಕ್ಷವೇ ಕಾರಣ ಎಂದು ಅವರು ಗಂಭೀರವಾಗಿ ದೂಷಿಸಿದ್ದಾರೆ.




