
ಗದಗ: ಮುಸುಕುಧಾರಿ ಕಳ್ಳರ ಗ್ಯಾಂಗ್ ಮತ್ತೆ ಪ್ರತ್ಯಕ್ಷವಾಗಿದ್ದು, ಸರಣಿ ಕಳ್ಳತನಗಳ ಮೂಲಕ ಸಾರ್ವಜನಿಕರಲ್ಲಿ ತೀವ್ರ ಭೀತಿ ಮೂಡಿಸಿದೆ. ನಗರದ ಪುಟ್ಟರಾಜ್ ನಗರ ಮತ್ತು ಕೇಶವ್ ಪಾರ್ಕ್ ಪ್ರದೇಶಗಳಲ್ಲಿ ನಡುರಾತ್ರಿ ಐವರು ಮುಸುಕುಧಾರಿಗಳು ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ರಾಜಾರೋಷವಾಗಿ ಸಂಚರಿಸುತ್ತಿರುವ ಭಯಾನಕ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ಕಿಡಿಗೇಡಿಗಳು ಬಡಾವಣೆಯ ನಿವಾಸಿ ವಿಜಯಲಕ್ಷ್ಮೀ ಎಂಬುವವರ ಮನೆಯ ಬೀಗ ಮುರಿದು ಒಳನುಗ್ಗಿದ್ದು, ಕುಟುಂಬದವರು ಜನ್ಮದಿನದ ಕಾರ್ಯಕ್ರಮಕ್ಕಾಗಿ ತಂದೆಯ ಮನೆಗೆ ಹೋಗಿದ್ದ ಸಮಯವನ್ನೇ ಹೊಂಚು ಹಾಕಿ ಕೃತ್ಯ ಎಸಗಿದ್ದಾರೆ. ಮನೆಯಲ್ಲಿದ್ದ ಸುಮಾರು 70 ಗ್ರಾಂ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ದೋಚಿ ಕಳ್ಳರು ಪರಾರಿಯಾಗಿದ್ದಾರೆ.
ಈ ಘಟನೆಯಿಂದಾಗಿ ಸ್ಥಳೀಯ ನಿವಾಸಿಗಳು ಸಂಜೆ 8 ಗಂಟೆಯಾಗುತ್ತಿದ್ದಂತೆಯೇ ಮನೆಯಿಂದ ಹೊರಬರಲು ಭಯಪಡುವಂತಾಗಿದೆ. ಜನವಸತಿ ಪ್ರದೇಶದಲ್ಲೇ ಮಾರಕಾಸ್ತ್ರಗಳೊಂದಿಗೆ ಕಳ್ಳರು ತಿರುಗಾಡುತ್ತಿರುವುದು ಪೋಲೀಸ್ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕೂಡಲೇ ಈ ಮುಸುಕುಧಾರಿ ಗ್ಯಾಂಗ್ ಅನ್ನು ಪತ್ತೆಹಚ್ಚಿ ಬಂಧಿಸಬೇಕು ಮತ್ತು ಬಡಾವಣೆಗಳಲ್ಲಿ ರಾತ್ರಿ ವೇಳೆಯ ಪೊಲೀಸ್ ಗಸ್ತು ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಸಾರ್ವಜನಿಕರು ಆಕ್ರೋಶದೊಂದಿಗೆ ಆಗ್ರಹಿಸಿದ್ದಾರೆ. ಪ್ರಸ್ತುತ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದು, ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.




