bengaluruರಾಜ್ಯಸುದ್ದಿ

ಕ್ಷಣಾರ್ಧದ ಅಚಾತುರ್ಯಕ್ಕೆ ಬಲಿಯಾದ ಪುಟ್ಟ ಕುಟುಂಬ…!


ಬೆಂಗಳೂರು: ಬೆಂಗಳೂರಿನ ಚಂದ್ರಾಲೇಔಟ್ ಸಮೀಪದ ಭೈರವೇಶ್ವರ ನಗರದಲ್ಲಿ ತಾಯಿ ಮತ್ತು ಮಗುವಿನ ಸಾವಿನ ಅತ್ಯಂತ ಮನಕಲಕುವ ಘಟನೆಯೊಂದು ಸಂಭವಿಸಿದೆ. ಕೇವಲ ಒಂದು ಕ್ಷಣದ ಅಚಾತುರ್ಯದಿಂದ ಮಗು ನೀರಿನ ಬಕೆಟ್‌ಗೆ ಬಿದ್ದು ಸಾವನ್ನಪ್ಪಿದ್ದು, ಆ ಆಘಾತವನ್ನು ತಾಳಲಾರದೆ ತಾಯಿ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ದುರ್ದೈವಿಗಳನ್ನು ಪ್ರತಿಭಾ (29) ಮತ್ತು ಮಗು ಅಗಸ್ತ್ಯ ಎಂದು ಗುರುತಿಸಲಾಗಿದೆ. ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದ ಪ್ರತಿಭಾ ಅವರು ಮನೆಯಿಂದಲೇ ಕೆಲಸ ಮಾಡುತ್ತಿದ್ದರು.

ಪ್ರತಿಭಾ ಒಣಗಿದ ಬಟ್ಟೆಗಳನ್ನು ತರಲು ಟೆರೇಸ್‌ಗೆ ಹೋಗಿದ್ದ ಸಂದರ್ಭದಲ್ಲಿ, ಮನೆಯೊಳಗೆ ಆಟವಾಡುತ್ತಿದ್ದ ಮಗು ಅಗಸ್ತ್ಯ ಅಚಾನಕ್ಕಾಗಿ ಬಚ್ಚಲು ಮನೆಗೆ ಹೋಗಿ ನೀರಿನ ಬಕೆಟ್‌ಗೆ ಬಿದ್ದಿದೆ. ತಾಯಿ ವಾಪಸ್ ಬಂದು ನೋಡುವಷ್ಟರಲ್ಲಿ ಮಗು ಉಸಿರುಗಟ್ಟಿ ಸಾವನ್ನಪ್ಪಿತ್ತು. ಮಗುವಿನ ಈ ಅನಿರೀಕ್ಷಿತ ಸಾವು ಪ್ರತಿಭಾ ಅವರಿಗೆ ತೀವ್ರ ಆಘಾತ ಮತ್ತು ಅಪರಾಧಿ ಪ್ರಜ್ಞೆಯನ್ನು ಉಂಟುಮಾಡಿದೆ. ಈ ನೋವಿನಿಂದಾಗಿ ಅವರು ಮೊದಲು ಮಾತ್ರೆಗಳನ್ನು ಸೇವಿಸಿ, ನಂತರ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅದೂ ವಿಫಲವಾದಾಗ ಅಂತಿಮವಾಗಿ ನೇಣಿಗೆ ಶರಣಾಗಿದ್ದಾರೆ.

ಪತಿ ಮಹಂತೇಶ್ ಅವರು ಕೆಲಸ ಮುಗಿಸಿ ರಾತ್ರಿ ಮನೆಗೆ ಮರಳಿದಾಗ ಈ ದಾರುಣ ದೃಶ್ಯ ಬೆಳಕಿಗೆ ಬಂದಿದೆ. ಮನೆಯೊಳಗೆ ಮಗು ಹಾಸಿಗೆಯ ಮೇಲೆ ಮಲಗಿದ ಸ್ಥಿತಿಯಲ್ಲಿದ್ದರೆ, ಪತ್ನಿ ಪ್ರತಿಭಾ ನೇಣು ಬಿಗಿದುಕೊಂಡಿದ್ದರು. ಸ್ಥಳದಲ್ಲಿ ಪತ್ತೆಯಾದ ಡೆತ್ ನೋಟ್‌ನಲ್ಲಿ, “ನನ್ನ ಮಗುವಿನ ಸಾವಿಗೆ ನಾನೇ ಕಾರಣ, ನನ್ನ ಮಗುವನ್ನು ಉಳಿಸಿಕೊಳ್ಳಲು ನನ್ನಿಂದ ಸಾಧ್ಯವಾಗಲಿಲ್ಲ” ಎಂದು ಪ್ರತಿಭಾ ನೋವಿನಿಂದ ಬರೆದಿಟ್ಟಿದ್ದಾರೆ. ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಒಂದು ಪುಟ್ಟ ಕುಟುಂಬವು ಕ್ಷಣಾರ್ಧದಲ್ಲಿ ಹೀಗೆ ದುರಂತ ಅಂತ್ಯ ಕಂಡಿರುವುದು ಇಡೀ ನಗರವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

Comments (0)

Your email address will not be published. Required fields are marked *

Back to top button