bengaluruಸುದ್ದಿ

ಬೆಂಗಳೂರಿನ ಆಟೋ ಸಾರಥಿಗಳ ಬದುಕಿಗೆ ತಟ್ಟಿದ ಗ್ಯಾಸ್ ಬಿಸಿ.!

ಬೆಂಗಳೂರು: ಬೆಂಗಳೂರಿನ ಸುಮಾರು 2 ಲಕ್ಷ ಆಟೋ ಚಾಲಕರ ಬದುಕಿಗೆ ಈಗ ಇಂಧನ ಅಥವಾ ಗ್ಯಾಸ್ ಕೊರತೆಯ ಸಂಕಷ್ಟ ಎದುರಾಗಿದ್ದು, ಸಿಲಿಕಾನ್ ಸಿಟಿಯ ಸಾರಥಿಗಳ ಜೀವನ ಅಕ್ಷರಶಃ ಉಸಿರುಗಟ್ಟುವಂತಾಗಿದೆ. ನಗರದಲ್ಲಿರುವ ಲಕ್ಷಾಂತರ ಆಟೋಗಳಿಗೆ ಕೇವಲ 31 ಗ್ಯಾಸ್ ಸ್ಟೇಷನ್‌ಗಳಿದ್ದು, ಅಂದರೆ ಪ್ರತಿ 6 ಸಾವಿರ ಆಟೋಗಳಿಗೆ ಕೇವಲ ಒಂದು ಸ್ಟೇಷನ್ ಲಭ್ಯವಿರುವಂತಾಗಿದೆ.

ಇದರಿಂದಾಗಿ ಗ್ಯಾಸ್ ಬಂಕ್‌ಗಳ ಮುಂದೆ ಕಿಲೋಮೀಟರ್ ಉದ್ದದ ಸಾಲುಗಳು ಕಂಡುಬರುತ್ತಿದ್ದು, ಚಾಲಕರು ದಿನದ ಸುಮಾರು 5 ಗಂಟೆಗಳ ಕಾಲ ಕ್ಯೂನಲ್ಲೇ ಕಳೆಯುವಂತಾಗಿದೆ. ಈ ಇಂಧನ ಅಭಾವದ ನಡುವೆ ಗ್ಯಾಸ್ ದರ ಕೂಡ ಗಗನಕ್ಕೇರಿದ್ದು, ಹಿಂದೆ 42 ರೂಪಾಯಿ ಇದ್ದ ಕೆಜಿ ಗ್ಯಾಸ್ ಬೆಲೆ ಈಗ 80 ರೂಪಾಯಿ ದಾಟಿದೆ. ಇದು ಚಾಲಕರ ದೈನಂದಿನ ದುಡಿಮೆಯ ಮೇಲೆ ತೀವ್ರ ಹೊಡೆತ ನೀಡಿದ್ದು, ದಿನಕ್ಕೆ ಸರಾಸರಿ 600 ರೂಪಾಯಿಗಳಷ್ಟು ಬಾಡಿಗೆ ನಷ್ಟವಾಗುತ್ತಿದೆ.

ಒಂದೆಡೆ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಇರುವುದರಿಂದ ಆಟೋಗಳಿಗೆ ಬಾಡಿಗೆ ಸಿಗುವುದು ಅಪರೂಪವಾಗಿದೆ. ಇದರ ಬೆನ್ನಲ್ಲೇ ಸೃಷ್ಟಿಯಾಗಿರುವ ಈ ಕೃತಕ ಎನ್ನಲಾದ ಗ್ಯಾಸ್ ಅಭಾವವು ಆಟೋ ಚಾಲಕರ ಕುಟುಂಬಗಳನ್ನು ಬೀದಿಗೆ ತಳ್ಳುತ್ತಿದೆ.

ಕೊರೊನಾ ಲಾಕ್‌ಡೌನ್ ಸಂಕಷ್ಟದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದ ಚಾಲಕರಿಗೆ, ಈಗಿನ ಇಂಧನ ಸಮಸ್ಯೆ ಅಘೋಷಿತ ಲಾಕ್‌ಡೌನ್‌ನಂತೆ ಭಾಸವಾಗುತ್ತಿದೆ. ದುಡಿಮೆಯಿಲ್ಲದೆ ಹೆಂಡತಿ-ಮಕ್ಕಳನ್ನು ಸಾಕುವುದು ಮತ್ತು ಮಕ್ಕಳ ಶಾಲಾ ಫೀಸ್ ಕಟ್ಟುವುದು ಹೇಗೆ ಎಂಬ ಚಿಂತೆ ಸಾರಥಿಗಳನ್ನು ಕಾಡುತ್ತಿದೆ. ಸರ್ಕಾರದ ಮೌನ ಮತ್ತು ತೈಲ ಕಂಪನಿಗಳ ಜಾಣ ಕುರುಡುತನದಿಂದಾಗಿ 2 ಲಕ್ಷ ಆಟೋ ಚಾಲಕರ ಬದುಕು ಕಣ್ಣೀರಿನ ಕಥೆಯಾಗಿದ್ದು, ಬಡವರ ಈ ನೋವಿಗೆ ಶೀಘ್ರ ಪರಿಹಾರ ಸಿಗುವುದೇ ಎಂಬ ಪ್ರಶ್ನೆ ಎದುರಾಗಿದೆ.

ಆಟೋ ಎಲ್‌ಪಿಜಿ (LPG) ಅಭಾವವು ಏಪ್ರಿಲ್ 1ರ ವೇಳೆಗೆ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಚಾಲಕರ ಬದುಕು ಅಯೋಮಯವಾಗಿದೆ. ನಗರದಾದ್ಯಂತ ಎಲ್‌ಪಿಜಿ ದರದಲ್ಲಿ ಭಾರಿ ಏರಿಕೆಯಾಗಿದ್ದು, ಖಾಸಗಿ ಬಂಕ್‌ಗಳಲ್ಲಿ ಲೀಟರ್‌ಗೆ 85 ರೂ.ನಿಂದ 100 ರೂ. ವರೆಗೆ ದರ ವಿಧಿಸಲಾಗುತ್ತಿದೆ. ಕೆಲವು ಕಡೆಗಳಲ್ಲಿ ಈ ಬೆಲೆ 115 ರೂ. ತಲುಪಿದೆ ಎಂದು ವರದಿಯಾಗಿದೆ. ಸರ್ಕಾರಿ ಸ್ವಾಮ್ಯದ ಬಂಕ್‌ಗಳಲ್ಲಿ ಬೆಲೆ ತುಸು ಕಡಿಮೆಯಿದ್ದರೂ (ಸುಮಾರು 77-78 ರೂ.), ಅಲ್ಲಿ ಗಂಟೆಗಟ್ಟಲೆ ಸಾಲುಗಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಇದೆ.

Comments (0)

Your email address will not be published. Required fields are marked *

Back to top button