bengaluruರಾಜ್ಯಸುದ್ದಿ

ನೋಟಿಸ್ ಅಥವಾ ಎಫ್‌ಐಆರ್ ವಾಟ್ಸಾಪ್‌ನಲ್ಲಿ ಕಳುಹಿಸುವಂತಿಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

ಪೊಲೀಸ್ ನೋಟಿಸ್ ಅಥವಾ ಎಫ್‌ಐಆರ್ (FIR) ಪ್ರತಿಯನ್ನು ವಾಟ್ಸಾಪ್ ಅಥವಾ ಇನ್ಯಾವುದೇ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಕಳುಹಿಸುವ ಅಧಿಕಾರ ಪೊಲೀಸರಿಗೆ ಇಲ್ಲ ಮತ್ತು ಅದನ್ನು ಭೌತಿಕವಾಗಿಯೇ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹೂಡಿಕೆದಾರರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪ ಹೊತ್ತಿರುವ ಯೋಗ ಶಿಕ್ಷಕ ಆರ್. ಯುಗದೇವ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 35(3) ಅಡಿಯಲ್ಲಿ ನೋಟಿಸ್ ಅನ್ನು ಖುದ್ದಾಗಿ ಭೌತಿಕ ರೂಪದಲ್ಲಿ ನೀಡುವುದು ಅನಿವಾರ್ಯ ಎಂದು ಸ್ಪಷ್ಟಪಡಿಸಿದೆ. ಏಳು ವರ್ಷಕ್ಕಿಂತ ಕಡಿಮೆ ಅವಧಿಯ ಶಿಕ್ಷೆ ಇರುವ ಪ್ರಕರಣಗಳಲ್ಲಿ ಬಂಧನಕ್ಕೂ ಮುನ್ನ ನೋಟಿಸ್ ನೀಡುವುದು ಕಡ್ಡಾಯವಾಗಿದ್ದರೂ, ಆರೋಪಿಯು ಉದ್ದೇಶಪೂರ್ವಕವಾಗಿ ತಲೆಮರೆಸಿಕೊಂಡು ತನಿಖೆಗೆ ಅಸಹಕಾರ ತೋರಿದರೆ ಅಂತಹ ಸಂದರ್ಭದಲ್ಲಿ ಪೊಲೀಸರು ನೇರವಾಗಿ ಬಂಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ನ್ಯಾಯಾಲಯ ಹೇಳಿದೆ.

ಈ ಪ್ರಕರಣದಲ್ಲಿ ಅರ್ಜಿದಾರ ಯೋಗ ಶಿಕ್ಷಕ ಸುಮಾರು 40 ದಿನಗಳ ಕಾಲ ತಮಿಳುನಾಡಿನ ವಿವಿಧೆಡೆ ಸಂಚರಿಸುತ್ತಾ ಪೊಲೀಸರಿಗೆ ಸಿಗದಂತೆ ತಲೆಮರೆಸಿಕೊಂಡಿದ್ದು ಕರೆ ದಾಖಲೆಗಳಿಂದ ಸಾಬೀತಾಗಿದೆ. ಪೊಲೀಸರು ನೋಟಿಸ್ ನೀಡಲು ಪ್ರಯತ್ನಿಸಿದಾಗಲೆಲ್ಲಾ ತಪ್ಪಿಸಿಕೊಳ್ಳುವುದು ತನಿಖೆಗೆ ತೋರುವ ಅಸಹಕಾರ ಎಂದು ಪರಿಗಣಿಸಲಾಗುತ್ತದೆ. ಇಂತಹ ಸನ್ನಿವೇಶದಲ್ಲಿ ನೋಟಿಸ್ ನೀಡುವ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೂ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆಯಬಹುದು ಎಂದು ತಿಳಿಸಿದ ಪೀಠವು, ಮ್ಯಾಜಿಸ್ಟ್ರೇಟ್ ಹೊರಡಿಸಿದ್ದ ಬಂಧನ ಆದೇಶದಲ್ಲಿ ಯಾವುದೇ ಕಾನೂನು ಲೋಪವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿದೆ. ಯುಗದೇವ್ ಮತ್ತು ಆತನ ಪತ್ನಿ ಆನ್‌ಲೈನ್ ಹೂಡಿಕೆ ಹೆಸರಿನಲ್ಲಿ ಸುಮಾರು 98 ಲಕ್ಷ ರೂಪಾಯಿ ಹಣ ಪಡೆದು ವಂಚಿಸಿದ್ದಾರೆ ಎಂಬ ಆರೋಪದ ಮೇಲೆ ಆಡುಗೋಡಿ ಠಾಣೆಯಲ್ಲಿ ದೂರು ದಾಖಲಾಗಿತ್ತು.

Comments (0)

Your email address will not be published. Required fields are marked *

Back to top button