ಕ್ರೈಂ ಸ್ಟೋರಿದೇಶ/ವಿದೇಶಸುದ್ದಿ

ಕೇವಲ ಒಂದು ಚಾಕೊಲೇಟ್‌ಗಾಗಿ ಮಗುವಿನ ಬಲಿ..!

ಉತ್ತರ ಪ್ರದೇಶದ ಬುಲಂದ್​ಶಹರ್‌ನಲ್ಲಿ ಮನುಕುಲವೇ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದ್ದು, ಕೇವಲ ಚಾಕೊಲೇಟ್ ಕದ್ದಿರಬಹುದು ಎಂಬ ಸಣ್ಣ ಸಂಶಯಕ್ಕೆ ತಂದೆಯೇ ತನ್ನ 12 ವರ್ಷದ ಮಗಳನ್ನು ದೊಣ್ಣೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದಾನೆ. ನರೋರಾದ ರತನ್‌ಪುರ ಗ್ರಾಮದಲ್ಲಿ ನಡೆದ ಈ ಘಟನೆಯಲ್ಲಿ, ಮದ್ಯವ್ಯಸನಿಯಾಗಿದ್ದ ಪುಷ್ಪೇಂದ್ರ ಎಂಬಾತ ತನ್ನ ಮಗಳ ಮೇಲೆ ಈ ಕ್ರೌರ್ಯ ಮೆರೆದಿದ್ದಾನೆ. ಅಂಗಡಿಯವನೊಬ್ಬ ಬಾಲಕಿಯ ಮೇಲೆ ಚಾಕೊಲೇಟ್ ಕದ್ದಿರುವ ಆರೋಪ ಹೊರಿಸಿದ್ದರಿಂದ ಕೆರಳಿದ ತಂದೆ, ಮನೆಯಲ್ಲಿ ತಾಯಿ ಎಷ್ಟೇ ತಡೆಯಲು ಪ್ರಯತ್ನಿಸಿದರೂ ಕೇಳದೆ ಮರದ ಕೋಲಿನಿಂದ ಮಗುವಿನ ತಲೆಗೆ ತೀವ್ರವಾಗಿ ಪೆಟ್ಟು ನೀಡಿದ್ದಾನೆ.

ಬಾಲಕಿ ಪ್ರಜ್ಞಾಹೀನಳಾಗಿ ಬಿದ್ದಿದ್ದರೂ ಮರುಕ ತೋರದ ಆತ, ಮಗುವನ್ನು ಮನೆಯೊಳಗೆ ಬಿಟ್ಟು ತಾಯಿಯನ್ನು ಕೂಡಿಹಾಕಿ ಅಲ್ಲಿಂದ ಪರಾರಿಯಾಗಿದ್ದಾನೆ. ನೆರೆಹೊರೆಯವರು ಬಂದು ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬಾಲಕಿಯ ದೇಹದ ಮೇಲೆ 10 ರಿಂದ 12 ಗಂಭೀರ ಗಾಯದ ಗುರುತುಗಳಿರುವುದು ಪತ್ತೆಯಾಗಿದೆ. ಇತ್ತೀಚೆಗಷ್ಟೇ ಮಹಾರಾಷ್ಟ್ರದ ಸಾಂಗ್ಲಿಯಲ್ಲಿಯೂ ಇಂತಹದ್ದೇ ಘಟನೆ ನಡೆದಿದ್ದು, ಕಳ್ಳತನದ ಶಂಕೆಯ ಮೇಲೆ ತಂದೆಯೊಬ್ಬ ತನ್ನಿಬ್ಬರು ಹೆಣ್ಣುಮಕ್ಕಳನ್ನು ತಲೆಕೆಳಗಾಗಿ ನೇತುಹಾಕಿ ಹಿಂಸಿಸಿದ್ದರಿಂದ ಒಬ್ಬಳು ಬಾಲಕಿ ಸಾವನ್ನಪ್ಪಿದ್ದಳು. ಇಂತಹ ಘಟನೆಗಳು ಸಮಾಜದಲ್ಲಿ ಮಕ್ಕಳ ಮೇಲಿನ ಹಿಂಸಾಚಾರ ಮತ್ತು ಮದ್ಯವ್ಯಸನದಿಂದ ಉಂಟಾಗುತ್ತಿರುವ ದುರಂತಗಳಿಗೆ ಹಿಡಿದ ಕೈಗನ್ನಡಿಯಾಗಿವೆ.

Comments (0)

Your email address will not be published. Required fields are marked *

Back to top button