
ಪಶ್ಚಿಮ ಏಷ್ಯಾ ಸಂಘರ್ಷದ ವೇಳೆ ದೇಶದ ಮೇಲಾಗುವ ಪ್ರತಿಕೂಲ ಪರಿಣಾಮಗಳ ಬಗ್ಗೆ ಕೇಂದ್ರ ಸರ್ಕಾರ ಸತತ ನಿಗಾ ವಹಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಹಿರಿಯ ಸಚಿವರು ಮತ್ತು ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ, ಮಹತ್ವದ ಚರ್ಚೆ ನಡೆಸಿದ್ದಾರೆ.
ದೇಶದ ಸದ್ಯದ ಪರಿಸ್ಥಿತಿ ಅವಲೋಕಿಸಿದ ಪ್ರಧಾನಿ, ಭವಿಷ್ಯದಲ್ಲಿ ಭಾರತದ ಮೇಲಾಗುವ ಪರಿಣಾಮ ಹಾಗೂ ಸರ್ಕಾರ ಜನಹಿತಕ್ಕಾಗಿ ಕೈಗೊಳ್ಳಬಹುದಾದ ಪರಿಹಾರ, ಪರ್ಯಾಯ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು. ಅಲ್ಲದೇ, ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಒಳಗೊಂಡಂತೆ ಹಿರಿಯ ಸಚಿವರುಗಳ ತಂಡ ಸಹ ರಚಿಸಿದ್ದಾರೆ.
ಸಂಪುಟ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಧಾನಿ ಅವರು, ಜಾಗತಿಕ ಪರಿಸ್ಥಿತಿ ಮತ್ತು ಕೇಂದ್ರ ಸರ್ಕಾರದ ಸಚಿವಾಲಯ, ಇಲಾಖೆಗಳು ಕೈಗೊಂಡಿರುವ ಕ್ರಮಗಳ ಕುರಿತು ಸಂಪುಟ ಕಾರ್ಯದರ್ಶಿಯಿಂದ ಸಮಗ್ರ ಮಾಹಿತಿ ಪಡೆದುಕೊಂಡರು. ಕೃಷಿ, ರಸಗೊಬ್ಬರ, ಆಹಾರ ಭದ್ರತೆ, ಪೆಟ್ರೋಲಿಯಂ, ವಿದ್ಯುತ್, ಎಂಎಸ್ಎಂಇಗಳು, ರಫ್ತುದಾರರು, ಸಾಗಣೆ, ವ್ಯಾಪಾರ, ಹಣಕಾಸು ವಲಯಗಳ ಮೇಲಿನ ನಿರೀಕ್ಷಿತ ಪರಿಣಾಮ ಮತ್ತು ಪರಿಹಾರ ಕ್ರಮಗಳ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ.
ಈ ಜಾಗತಿಕ ಯುದ್ಧದ ಸನ್ನಿವೇಶದಲ್ಲಿ ದೇಶ ಭದ್ರತೆ, ರಕ್ಷಣೆ, ಆಹಾರ, ಅಗತ್ಯ ಸಾಮಗ್ರಿ ಪೂರೈಕೆ ವಿಚಾರವಾಗಿ ಸಮರ್ಪಕ, ಸಮರ್ಪಿತವಾಗಿ ಕೆಲಸ ಮಾಡಲು ಸಚಿವರು ಮತ್ತು ಕಾರ್ಯದರ್ಶಿಗಳ ತಂಡ ರಚನೆಗೆ ಪ್ರಧಾನಿ ನಿರ್ದೇಶನ ನೀಡಿದರು. ಮಧ್ಯಪ್ರಾಚ್ಯ ಯುದ್ಧ ಸಂಘರ್ಷ ತೀವ್ರಗೊಳ್ಳುತ್ತಿದ್ದರಿಂದ ಇಂದು ಇಡೀ ಜಗತ್ತೇ ಒಂದಲ್ಲೊಂದು ರೂಪದಲ್ಲಿ ಕ್ಷಾಮ, ಪರಿಣಾಮ ಎದುರಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಕ್ಲಿಷ್ಟ ಪರಿಸ್ಥಿತಿಯಲ್ಲಿ ನಾಗರಿಕರ ರಕ್ಷಣೆಗೆ ಸರ್ವ ಪ್ರಯತ್ನ ನಡೆಸುವಂತೆ ಸಚಿವ ಸಂಪುಟ ಸಮಿತಿಗೆ ನಿರ್ದೇಶನ ನೀಡಿದರು.
ಮಾರುಕಟ್ಟೆಗಳಲ್ಲಿ ಕೃತಕ ಅಭಾವ ಸೃಷ್ಟಿ ಮತ್ತು ಪ್ರಮುಖ ಸರಕುಗಳ ಸಂಗ್ರಹಣೆ ಮೇಲೆ ನಿಗಾ ವಹಿಸುವ ಜೊತೆಗೆ ಆಯಾ ರಾಜ್ಯ ಸರ್ಕಾರಗಳೊಂದಿಗೆ ಸಮನ್ವಯ ಸಾಧಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಎಲ್ಲಾ ಪ್ರಮುಖ ಸಚಿವರುಗಳು ಮತ್ತು ಇಲಾಖಾ ಕಾರ್ಯದರ್ಶಿಗಳಿಗೆ ಸಲಹೆ ನೀಡಿದರು.




