ದೇಶ/ವಿದೇಶ

ಬೆಕ್ಕಿನ ವಿಚಾರಕ್ಕೆ ಜಗಳ; ಮನನೊಂದು ಪ್ರಾಣ ಕಳೆದುಕೊಂಡ ಯುವತಿ!

ಹೈದರಾಬಾದ್‌: ಸಾಕಿದ ಬೆಕ್ಕಿನ ವಿಚಾರವಾಗಿ ಕುಟುಂಬದೊಂದಿಗೆ ಉಂಟಾದ ಸಣ್ಣ ಭಿನ್ನಾಭಿಪ್ರಾಯವೊಂದು 23 ವರ್ಷದ ಯುವ ವೈದ್ಯೆಯೊಬ್ಬರ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ. ಇತ್ತೀಚೆಗಷ್ಟೇ ವೈದ್ಯಕೀಯ ಪದವಿ ಮುಗಿಸಿ ಸ್ನಾತಕೋತ್ತರ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಟಿ. ಪ್ರಿನ್ಸಿ ಅಲಿಯಾಸ್ ಶ್ರೇಷ್ಠಾ ಮೃತ ಪಟ್ಟಿದ್ದಾರೆ .

ಪ್ರಿನ್ಸಿ ಅವರು ಕೆಲವು ವಾರಗಳ ಹಿಂದೆ ಪ್ರೀತಿಯಿಂದ ಬೆಕ್ಕೊಂದನ್ನು ಮನೆಗೆ ತಂದು ಸಾಕುತ್ತಿದ್ದರು. ಆದರೆ ಬೆಕ್ಕು ಬಂದ ನಂತರ ಅವರಿಗೆ ನಿರಂತರವಾಗಿ ಶೀತ ಮತ್ತು ಕೆಮ್ಮಿನಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಿಸಿದ್ದವು. ಇದರಿಂದ ಆತಂಕಗೊಂಡ ಅವರ ತಾಯಿ ಮತ್ತು ಅಜ್ಜಿ, ಆರೋಗ್ಯದ ದೃಷ್ಟಿಯಿಂದ ಬೆಕ್ಕನ್ನು ಮನೆಯಿಂದ ಹೊರಹಾಕುವಂತೆ ಒತ್ತಾಯಿಸಿದ್ದರು. ಇದೇ ವಿಷಯವಾಗಿ ಮನೆಯಲ್ಲಿ ಪದೇ ಪದೇ ಜಗಳ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.

ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ತಾಯಿ ಮತ್ತು ಅಜ್ಜಿ ಮನೆಗೆ ವಾಪಸ್ ಬಂದಾಗ ಪ್ರಿನ್ಸಿ ತಮ್ಮ ಕೋಣೆಯ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ರವಾನಿಸಲಾಗಿದೆ.ಅಲ್ವಾಲ್ ಪೊಲೀಸರು ಸದ್ಯಕ್ಕೆ ಈ ಘಟನೆಯನ್ನು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ವೈದ್ಯಕೀಯ ವೃತ್ತಿಯಲ್ಲಿ ಸಾಧನೆ ಮಾಡಬೇಕಿದ್ದ ಯುವತಿ ಕ್ಷಣಿಕ ಆವೇಶದಲ್ಲಿ ಇಂತಹ ನಿರ್ಧಾರ ತಳೆದಿರುವುದು ಕುಟುಂಬವನ್ನು ಕಣ್ಣೀರಲ್ಲಿ ಮುಳುಗಿಸಿದೆ.

Comments (0)

Your email address will not be published. Required fields are marked *

Back to top button