ರಾಜ್ಯ

ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್; ಟಿಕೆಟ್ ದರ ಏರಿಸಲ್ಲ ಎಂದ ಸಚಿವರು!

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೇರುತ್ತಿದ್ದರೂ, ಸದ್ಯಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ ಟಿಕೆಟ್ ದರವನ್ನು ಹೆಚ್ಚಿಸುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ದರ ಏರಿಕೆ ಮಾಡುವ ಅಧಿಕಾರ ಸದ್ಯಕ್ಕೆ ಇಲ್ಲ ಎಂದು ಹೇಳಿರುವ ಅವರು, ಸಾರ್ವಜನಿಕರ ಹಿತದೃಷ್ಟಿಯಿಂದ ದರ ಹೆಚ್ಚಳದ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧದ ಪರಿಸ್ಥಿತಿಯೇ ಇಂಧನ ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದ್ದು, ಯುದ್ಧ ನಿಂತರೆ ತೈಲ ಬೆಲೆಗಳು ತಾನಾಗಿಯೇ ಇಳಿಕೆಯಾಗಲಿವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಚಿವರು, ಕಚ್ಚಾ ತೈಲದ ಬೆಲೆ ಕಡಿಮೆಯಿದ್ದಾಗಲೂ ಕೇಂದ್ರ ಸರ್ಕಾರ ಅದರ ಲಾಭವನ್ನು ಜನರಿಗೆ ತಲುಪಿಸಲಿಲ್ಲ . ಯುಪಿಎ ಸರ್ಕಾರದ ಅವಧಿಯಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್‌ಗೆ 100-130 ಡಾಲರ್ ಇದ್ದರೂ, ಜನರಿಗೆ ಹೊರೆಯಾಗದಂತೆ ಸಬ್ಸಿಡಿ ನೀಡಲಾಗಿತ್ತು. ಆದರೆ ಕಳೆದ 10-12 ವರ್ಷಗಳಲ್ಲಿ ಕಚ್ಚಾ ತೈಲದ ಬೆಲೆ ಗಣನೀಯವಾಗಿ ಇಳಿಕೆಯಾಗಿದ್ದರೂ ಕೇಂದ್ರ ಸರ್ಕಾರವು ಜನರಿಗೆ ರಿಯಾಯಿತಿ ನೀಡುವ ಬದಲಿಗೆ ತಾನೇ ಲಾಭ ಮಾಡಿಕೊಂಡಿದೆ ಎಂದು ಅವರು ಟೀಕಿಸಿದರು.

ರಾಜ್ಯ ಸರ್ಕಾರವು ಬಸ್ ದರವನ್ನು ಹೆಚ್ಚಿಸದೆ ಜನಸಾಮಾನ್ಯರ ಪರವಾಗಿ ನಿಲ್ಲಲಿದೆ, ಆದರೆ ಕೇಂದ್ರ ಸರ್ಕಾರವು ತೈಲ ಬೆಲೆಗಳನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಅವರು ಪುನರುಚ್ಚರಿಸಿದರು. ಸಾರಿಗೆ ಸಂಸ್ಥೆಗಳು ನಷ್ಟದಲ್ಲಿದ್ದರೂ ಸಾರ್ವಜನಿಕರ ಮೇಲೆ ಹೆಚ್ಚಿನ ಹೊರೆ ಹಾಕಬಾರದು ಎಂಬುದು ಸರ್ಕಾರದ ನಿಲುವು ಎಂದು ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು.

Comments (0)

Your email address will not be published. Required fields are marked *

Back to top button